
ಮಂಗಳೂರು: ಮಂಗಳೂರಿನ ಎನ್ಐಟಿಕೆ ಬೀಚ್ ನಲ್ಲಿ ಪಿಂಡ ಪ್ರದಾನ ಮಾಡಲು ಬಂದಿದ್ದಾಗ ಸಮುದ್ರದಲ್ಲಿ ಮುಳುಗಿ ಸೋದರಿಯರಿಬ್ಬರು ನೀರು ಪಾಲಾಗಿರುವ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಮೃತರು ಮಂಗಳೂರಿನ ಶಕ್ತಿನಗರ ನಿವಾಸಿಗಳಾಗಿದ್ದಾರೆ.
ಸುರತ್ಕಲ್ ಎನ್ಐಟಿಕೆ ಬೀಚ್ ನಲ್ಲಿ ಮಂಗಳೂರಿನ ಶಕ್ತಿನಗರದ ನಿವಾಸಿಗಳಾದ 21 ವರ್ಷದ ವೈಷ್ಣವಿ ಮತ್ತು 17 ವರ್ಷದ ತ್ರಿಷಾ ಸಾವನ್ನಪ್ಪಿದ್ದಾರೆ. ಸಮುದ್ರದ ಅಲೆಗಳ ಸೆಳೆತಕ್ಕೆ ಮೂವರು ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಈಜುಗಾರರು ಹಾಗು ಹೋಮ್ ಗಾರ್ಡ್ ಸಿಬ್ಬಂದಿಗಳು ಮೂವರನ್ನು ರಕ್ಷಿಸಿದ್ದರು.
ಉಳಿದ ಮೂವರು ತೀವ್ರವಾಗಿ ಅಸ್ವಸ್ಥಗೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೂವರಲ್ಲಿ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ. ವೆಂಕಟೇಶ್ ಎಂಬುವರು ಚೇತರಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತ ಸೋದರಿಯರು ಅಣ್ಣ ತಮ್ಮಂದಿರ ಮಕ್ಕಳು ಎಂದು ತಿಳಿದುಬಂದಿದೆ.
ಇತ್ತೀಚಿಗೆ ಮರಣ ಹೊಂದಿದ ವೆಂಕಟೇಶ್ ಅವರ ಮಾವನವರ ಪಿಂಡ ಪ್ರಧಾನ ಕಾರ್ಯಕ್ಕೆ ಈ ಕುಟುಂಬ ಸುರತ್ಕಲ್ ಎನ್ಐಟಿಕೆ ಬೀಚ್ ಗೆ ತೆರಳಿತ್ತು.












































