Coastal

ಮಂಗಳೂರು: ನ್ಯಾಯಾಲಯದ ಆದೇಶ ಧಿಕ್ಕರಿಸಿ ಕಾಲೇಜಿನಲ್ಲಿ ಹಿಜಾಬ್ ಧಾರಣೆ: ವಿರೋಧಿಸಿ ಪ್ರತಿಭಟನೆ, ಸಿಡಿಸಿ ಅಧ್ಯಕ್ಷ ವೇದವ್ಯಾಸ್ ಕಾಮತ್ ಮೌನ

ಮಂಗಳೂರು: ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರತಿಧ್ವನಿಸಿದ್ದು ನ್ಯಾಯಾಲಯದ ಆದೇಶ ಇದ್ದರೂ ಕೂಡ ಧಿಕ್ಕರಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಿಕೊಂಡು ಬರಲಾಗುತ್ತಿದೆ. ಕಾಲೇಜಿನ ಆಡಳಿತ ಮಂಡಳಿ ಹಾಗು ಸಿಡಿಸಿ ಈ ಬಗ್ಗೆ ಮೌನವಹಿಸಿದೆ ಎಂದು ಕಾಲೇಜಿನ ಒಂದು ಗುಂಪು ಇಂದು ಪ್ರತಿಭಟನೆ ನಡೆಸಿತು.

ಹೈಕೋರ್ಟ್ ಆದೇಶ ಇದ್ದರೂ ಕಾಲೇಜಿನಲ್ಲಿ ಸುಮಾರು 40-45 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಕ್ಯಾಂಪಸ್ ಗೆ ಬರುತ್ತಿದ್ದಾರೆ. ತರಗತಿಯಲ್ಲೂ ಹಿಜಾಬ್ ತೆಗೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೇಳಿದರೆ ನಾವು ಜಿಲ್ಲಾಧಿಕಾರಿ ಜತೆ ಅನುಮತಿ ಪಡೆದಿದ್ದೇವೆ, ನಮ್ಮ ಶಾಸಕರೊಬ್ಬರು ನಮಗೆ ಹೇಳಿದ್ದಾರೆ ಎನ್ನುವ ಅಹಮಿಕೆಯ ಹೇಳಿಕೆ ನೀಡುತ್ತಾರೆ ಹಾಗು ಇವೆಲ್ಲವಕ್ಕೆ ಕಾಲೇಜಿನ ಹಲವು ಪ್ರಾಧ್ಯಾಪಕರುಗಳು ಬೆಂಗಾವಲಾಗಿ ನಿಂತಿದ್ದಾರೆ ಎಂದು ಆರೋಪಿಸಿ ಸುಮಾರು 60-70 ಮಂದಿ ವಿದ್ಯಾರ್ಥಿಗಳ ಗುಂಪು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿತು.

ಈ ಕೂಡಲೇ ನ್ಯಾಯಾಲಯದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು, ಸಿಡಿಸಿ ಅಧ್ಯಕರು ಕೂಡಲೇ ಸ್ಥಳಕ್ಕೆ ಬರಬೇಕು, ಹಾಗು ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷನ ವಜಾ ಮಾಡಬೇಕು ಎಂಬ ಆಗ್ರಹ ಪ್ರತಿಭಟನಾ ನಿರತರಲ್ಲಿ ಕೇಳಿಬಂದಿದೆ.

ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಅವರು ಇಲ್ಲಿನ ಸಿಡಿಸಿ ಅಧ್ಯಕ್ಷರಾಗಿದ್ದಾರೆ. “ಈ ವಿಷಯ ತಮ್ಮ ಗಮನಕ್ಕೆ ಬಂದಿಲ್ಲ, ಸರಿಯಾದ ಮಾಹಿತಿಯಿಲ್ಲ” ಎನ್ನುವ ಹೇಳಿಕೆ ನೀಡಿದ ವೇದವ್ಯಾಸ್ ಕಾಮತ್ ಕಾರ್ಯ ವೈಖರಿ ಬಗ್ಗೆಯೇ ಈಗ ಆಕ್ರೋಶ ಕೇಳಿಬಂದಿದೆ. ಆಡಳಿತಾರೂಢ ಪಕ್ಷದ ಶಾಸಕರೇ ಅಧ್ಯಕ್ಷರಾಗಿರುವ ಕಾಲೇಜಿನಲ್ಲಿ ಹೈಕೋರ್ಟ್ ಆದೇಶ ಪಾಲನೆಯಾಗುತ್ತಿಲ್ಲ ಎನ್ನುವುದು ಅಚ್ಚರಿಯ ವಿಷಯವಾಗಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

Exit mobile version