
ಬೆಂಗಳೂರು: ಹಿಂದೂ ದೇಗುಲಗಳ ಜಾತ್ರೆಯ ಸಂದರ್ಭ ಮುಸ್ಲಿಂ ವ್ಯಾಪಾರಿಗಳಿಗೆ ಹಲವೆಡೆ ನಿರ್ಬಂಧ ವಿಧಿಸಿರುವ ಕ್ರಮದ ಬಗ್ಗೆ ಇಂದು ವಿಧಾನಸಭೆಯಲ್ಲಿ ವಿಪಕ್ಷ ಆಡಳಿತ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಮಾತಿನ ಸಂದರ್ಭ ಮುಸ್ಲಿಮರಿಗೆ ಹಿಂದೂ ಜಾತ್ರೆಗಳಲ್ಲಿ ನಿರ್ಬಂಧ ವಿಧಿಸಿರುವವರು ಹೇಡಿಗಳು ಎನ್ನುವ ಮೂಲಕ ಹಿಂದೂಗಳು ಹೇಡಿಗಳು ಎಂಬರ್ಥದಲ್ಲಿ ಹೇಳಿದ್ದಾರೆ.
ಕಲಾಪದಲ್ಲಿ ಮಾತನಾಡಿದ ಉಳ್ಳಾಲ ಶಾಸಕ ಯು.ಟಿ. ಖಾದರ್, ರಾಜ್ಯದ ಅಭಿವೃದ್ಧಿಯಾಗಬೇಕಾದರೆ ಸಾಮರಸ್ಯ, ಸಹೋದರತೆ ಬೇಕು. ಕೆಲವು ಕ್ರೂರ ಮನಸ್ಸಿನವರು, ಹೇಡಿಗಳು, ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ಧರ್ಮದ ಭಾವನೆ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಕೆಲವೆಡೆ ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಧರ್ಮದವರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿದ್ದಾರೆ. ಅಂತಹವರು ಹೇಡಿಗಳು ಎಂದು ಹೇಳಿದರು.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ರಘುಪತಿಭಟ್, ಹರೀಶ್ ಪೂಂಜಾ, ಸಂಜೀವ್ ಮತಂದೂರು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ ಹಲವು ಸದಸ್ಯರು ಖಾದರ್ ಜತೆ ವಾಗ್ವಾದಕ್ಕೆ ಇಳಿದರು. ಹೇಡಿಗಳು ಯಾರು ಎಂದು ಖಾದರ್ ಹೇಳಬೇಕು ಎಂದು ರಘುಪತಿ ಭಟ್ ಮತ್ತು ಹರೀಶ್ ಪೂಂಜಾ ಪಟ್ಟು ಹಿಡಿದರು. ಆಗ ಖಾದರ್ ಅವರು ನಾನು ಇಲ್ಲಿ ಯಾವುದೇ ಧರ್ಮದ ಹೆಸರು ಪ್ರಸ್ತಾಪ ಮಾಡಿಲ್ಲ. ಎಂದು ಹೇಳಿ ಸಮಜಾಯಿಷಿ ನೀಡುವ ಪ್ರಯತ್ನ ಪಟ್ಟರೂ ಬಿಜೆಪಿ ಸದಸ್ಯರು ಬಿಡಲಿಲ್ಲ.
ರೇಣುಕಾಚಾರ್ಯ ಅವರು ಮಾತನಾಡಿ, ನಮ್ಮ ಮಠಗಳು, ದೇಗುಲಗಳಲ್ಲಿ ಅನ್ಯ ಮತೀಯರಿಗೆ ಅವಕಾಶ ಕೊಡುತ್ತೇವೆ. ಇವರುಗಳು ಮಸೀದಿಗೆ ಹೋಗಲು ಬಿಡುತ್ತಾರಾ ಎಂದು ಪ್ರಶ್ನೆ ಮಾಡಿ ಹೇಡಿ ಎಂಬ ಪದವನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದರು.












































