
ಮಂಗಳೂರು: ಹಿಜಾಬ್ ವಿವಾದ ಸಂದರ್ಭ ಮಂಗಳೂರಿನ ಸರಕಾರಿ ಕಾಲೇಜು ವಿದ್ಯಾರ್ಥಿ ಓರ್ವನಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬೆಳ್ತಂಗಡಿ ತಾಲೂಕಿನ ಹೊಕ್ಕಿಲ ಗ್ರಾಮದ ಮುಸ್ಲಿಂ ಯುವಕನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
20 ವರ್ಷದ ಆರೋಪಿ ಮೊಹಮ್ಮದ್ ಅಜ್ಮಲ್ ತನ್ನ ಚಿಕ್ಕಪ್ಪನ ವಿದೇಶಿ ಸಿಮ್ ಕಾರ್ಡ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆದು ಈ ಕೃತ್ಯ ಎಸಗಿದ್ದಾನೆ. ‘ಮಾರಿ_ಗುಡಿ_5 ಎಂದು ತನ್ನ ಗುರುತನ್ನು ಬದಲಾಯಿಸಿಕೊಂಡು ಇನ್‌ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದ ಎಂದು ಪೊಲೀಸ್ ಕಮಿಷನರ್ ಎನ್ ಶಶಿ ಕುಮಾರ್ ಹೇಳಿದ್ದಾರೆ.
ಮಂಗಳೂರಿನ ಕಾರ್ ಸ್ಟ್ರೀಟ್ ಬಳಿಯ ಸರ್ಕಾರೀ ಕಾಲೇಜಿನಲ್ಲಿ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ನ್ಯಾಯಾಲಯದ ಅಂದಿನ ಮಧ್ಯಂತರ ಆದೇಶವನ್ನು ಧಿಕ್ಕರಿಸಿ ಹಿಜಾಬ್ ಧರಿಸುವುದಕ್ಕೆ ಆಕ್ಷೇಪಿಸಿದ್ದಕ್ಕೆ ಮಂಗಳೂರಿನ ಸರ್ಕಾರಿ ಕಾಲೇಜು ವೊಂದರ ವಿದ್ಯಾರ್ಥಿ ಸಾಯಿ ಸಂದೇಶ್’ಗೆ ಮೊಹಮ್ಮದ್ ಅಜ್ಮಲ್ ಬೆದರಿಕೆ ಹಾಕಿದ್ದ. ಮಾರ್ಚ್ 4 ರಂದು ಮೊಹಮ್ಮದ್ ಅಜ್ಮಲ್ ಫೋಸ್ಟ್ ಮಾಡಿ ವಿದ್ಯಾರ್ಥಿಯ ಫೋಟೋ ಹಾಕಿ ಆತನನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜತೆಗೆ ಹಲವು ಅನಾಮಿಕ ವ್ಯಕ್ತಿಗಳಿಂದಲೂ ಜೀವ ಬೆದರಿಕೆ ಕರೆಗಳು ವಿದ್ಯಾರ್ಥಿಗೆ ಬಂದಿದ್ದವು.
ಆರೋಪಿ ಬಂಧನದ ಬಳಿಕ ಮಾತನಾಡಿದ ಪೊಲೀಸ್ ಆಯುಕ್ತರು, ಆರೋಪಿ ಅಜ್ಮಲ್ ತನ್ನ ಗುರುತನ್ನು ನಕಲಿ ಮಾಡಿಕೊಂಡು ನಾಲ್ಕು ಇನ್‌ಸ್ಟಾಗ್ರಾಮ್ ಖಾತೆಗಳನ್ನು ತೆರೆದಿದ್ದಾನೆ. ಜತೆಗೆ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಕೋಮು ಪ್ರಚೋದನಕಾರಿ ವಿಷಯವನ್ನು ಹರಡುವ ಒಂಬತ್ತು ವಾಟ್ಸಾಪ್ ಗುಂಪುಗಳ ಸದಸ್ಯನಾಗಿದ್ದಾನೆ ಎಂದು ತಿಳಿಸಿದರು.
ಆರೋಪಿ ವಿರುದ್ಧ ಐಪಿಸಿಯ ಸೆಕ್ಷನ್ 153(ಎ) ಮತ್ತು ಐಟಿ ಕಾಯ್ದೆಯ ಸೆಕ್ಷನ್ 66 (ಸಿ) ಮತ್ತು (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.