
ಮಂಗಳೂರು: ಮಂಗಳೂರಿನ ಕೆಪಿಟಿ ಜಂಕ್ಷನ್ ಬಳಿ ವಾಹನ ದಟ್ಟಣೆ ಹೆಚ್ಚಿದ್ದು ಸಾರ್ವಜನಿಕರ ಅನುಕೂಲಕ್ಕಾಗಿ ಫ್ಲೈ ಓವರ್ ನಿರ್ಮಿಸಲಾಗುವುದು. ನೂತನ ಫ್ಲೈ ಓವರ್ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಿದೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.
ಕೆಪಿಟಿ ಜಂಕ್ಷನ್ ಬಳಿ ಪ್ರತಿ ನಿತ್ಯ ವಿಮಾನ ನಿಲ್ದಾಣಕ್ಕೆ ಹೋಗುವ ವಾಹನಗಳು ಹಾಗೂ ಉಡುಪಿ ನಂತೂರು ಕಡೆ ಸಾಗುವ ವಾಹನಗಳಿಂದ ವಾಹನ ದಟ್ಟಣೆ ಇದ್ದ ಉಂಟಾಗುತ್ತಿದೆ. ಮಾಮೂಲಿ ದಿನಗಳಲ್ಲಿ ಬಿಡಿ, ಲಾಕ್ ಡೌನ್ ಸಂದರ್ಭ ಕೂಡ ಬೆಳಗಿನ ಹೊತ್ತು ಇಲ್ಲಿ ಹಲವು ನಿಮಿಷಗಳ ಕಾಲ ರಸ್ತೆ ತಡೆ ಉಂಟಾಗುತ್ತಿತ್ತು. ಹೀಗಾಗಿ ಇಲ್ಲೊಂದು ಫ್ಲೈ ಓವರ್ ನಿರ್ಮಿಸಬೇಕೆಂದು ಹಲವು ದಿನಗಳ ಬೇಡಿಕೆ ಇದೀಗ ಕಾರ್ಯರೂಪಕ್ಕೆ ಬರಲು ಸಜ್ಜಾಗಿದೆ.
ಸುಮಾರು 34.8 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಿಸಲು ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಬಹುದಿನಗಳ ಬೇಡಿಕೆಯನ್ನು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅನುಮೋದಿಸಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ದೇಶದಾದ್ಯಂತ ಸುದ್ದಿಗೆ ಗ್ರಾಸವಾಗಿದ್ದ ಪಂಪ್ವೆಲ್ ಫ್ಲೈ ಓವರ್ ಬಳಿಕ ಇದೀಗ ಕೆಪಿಟಿ ಬಳಿ ನಿರ್ಮಾಣಕ್ಕೆ ಉದ್ಧೇಶಿಸಿರುವ ಫ್ಲೈ ಒವರ್ ಬಗ್ಗೆ ಜನರಲ್ಲಿ ತೀವ್ರ ಕುತೂಹಲ ಮೂಡಿದೆ.