
ಬೆಳ್ತಂಗಡಿ: ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಆಯುಷ್ಯ ವೃದ್ಧಿ ಮತ್ತು ಉತ್ತಮ ಆರೋಗ್ಯದ ಪ್ರಾಪ್ತಿಗಾಗಿ ಜನವರಿ 17ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಮಹಾ ಮೃತ್ಯುಂಜಯ ಯಾಗದ ಪ್ರಸಾದವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಪ್ರಧಾನಿಯವರಿಗೆ ನೀಡಿದ್ದಾರೆ.
ಪ್ರಧಾನ ಮಂತ್ರಿಯವರನ್ನು ದೆಹಲಿಯಲ್ಲಿ ನೇರವಾಗಿ ಭೇಟಿ ಮಾಡಿದ ಶಾಸಕ ಹರೀಶ್ ಪೂಂಜಾ, ಯಾಗ ನಡೆಸಿಕೊಟ್ಟ ಪೂಜಾರಿಗಳೊಂದಿಗೆ ಶಾಸ್ತ್ರೋಕ್ತವಾಗಿ ಪ್ರಧಾನಿಯವರಿಗೆ ಪ್ರಸಾದವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ಅಭಿವೃದ್ಧಿ ಕಾರ್ಯಗಳ ಕುರಿತಾದ ಕಿರು ಹೊತ್ತಗೆಯನ್ನು ಕೂಡ ಶಾಸಕರು ಪ್ರಧಾನಿಗಳಿಗೆ ನೀಡಿದರು.
ಪ್ರಧಾನ ಮಂತ್ರಿಗಳ ಆಯುಷ್ಯ ಹಾಗು ಅರೋಗ್ಯ ವೃದ್ಧಿಗಾಗಿ ಜನವರಿ 17ರಂದು ಬೆಳ್ತಂಗಡಿ ಕ್ಷೇತ್ರದ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಧರ್ಮಸ್ಥಳ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸಲಾಗಿತ್ತು. ಇದು ಈ ವರ್ಷದ ಆರಂಭದಲ್ಲಿ ಪಂಜಾಬಿನಲ್ಲಿ ನರೇಂದ್ರ ಮೋದಿಯವರು ಎದುರಿಸಿದ ರಸ್ತೆ ತಡೆ ಪ್ರಕರಣದ ಹಿನ್ನಲೆಯಲ್ಲಿ ಆಯೋಜಿಸಲಾಗಿತ್ತು.
ಜನವರಿ 17ರ ಯಾಗದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ, ಹೇಮಾವತಿ ಹೆಗಡೆ, ಡಿ. ಹರ್ಷೇನ್ದ್ರ ಕುಮಾರ್, ರಾಜ್ಯ ಸರಕಾರದ ಮಂತ್ರಿಗಳಾದ ಕೆ.ಎಸ್ ಈಶ್ವರಪ್ಪ, ಸಿಸಿ ಪಾಟೀಲ್, ಎಸ್. ಅಂಗಾರ, ಶಶಿಕಲಾ ಜೊಲ್ಲೆ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮುಂತಾದವರು ಉಪಸ್ಥಿತರಿದ್ದರು.












































