
ಬೆಂಗಳೂರು: ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳು ಆಯಾ ಸಂಸ್ಥೆಯ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಹಿಜಾಬ್ ಹಾಗು ಕೇಸರಿ ಶಾಲು ಧರಿಸಲು ಅವಕಾಶ ಇಲ್ಲ ಎಂದು ರಾಜ್ಯ ಸರ್ಕಾರ ಖಡಕ್ ಆದೇಶ ನೀಡಿದೆ.
ರಾಜ್ಯದ ಕರಾವಳಿಯಲ್ಲಿ ಎದ್ದಿರುವ ವಿವಾದದ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಹಿಜಾಬ್ ಹಾಗು ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ. ಆಯಾ ಸಂಸ್ಥೆಯ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಹೇಳಿದ್ದಾರೆ.
ಈ ವಿಚಾರದಲ್ಲಿ ಶಿಕ್ಷಣ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಇಲಾಖೆ ಮತ್ತು ಪಿಯು ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ನಂತರ ಮಾತನಾಡಿದ ಬಿ.ಸಿ.ನಾಗೇಶ್, ಈ ವಿವಾದ ಪ್ರಸ್ತುತ ನ್ಯಾಯಾಲಯದಲ್ಲಿದ್ದು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ. ಹೈಕೋರ್ಟ್ ತೀರ್ಪು ಬರುವವರೆಗೆ ಸಮವಸ್ತ್ರ ನಿಯಮ ಪಾಲಿಸಬೇಕು ಎನ್ನುವುದನ್ನು ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುತ್ತೇವೆ ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದರು.