
ಬೆಂಗಳೂರು: ಕೋರೋನ ಮೂರನೇ ಅಲೆಯ ಹಿನ್ನಲೆಯಲ್ಲಿ ರಾಜ್ಯದಲ್ಲಿ ಸಿನಿಮಾ ಥಿಯೇಟರ್, ಜಿಮ್ ಹಾಗು ಸ್ವಿಮ್ಮಿಂಗ್ ಫೂಲ್ ಮೇಲೆ ಹೇರಲಾಗಿದ್ದ ಶೇಕಡಾ 50 ಭರ್ತಿ ನಿಯಮವನ್ನು ರಾಜ್ಯ ಸರ್ಕಾರ ಕೈಬಿಟ್ಟಿದ್ದು ನಾಳೆಯಿಂದ ಶೇಕಡಾ 100ರಷ್ಟು ಭರ್ತಿಗೆ ಅವಕಾಶ ಕಲ್ಪಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಹೊಸ ಆದೇಶದ ಪ್ರಕಾರ ಥಿಯೇಟರಿಗೆ ಹೋಗುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗು ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿರುತ್ತದೆ. ಹೊರಗಿನ ತಿಂಡಿ ಪದಾರ್ಥಗಳನ್ನ ಥಿಯೇಟರ್ ಒಳಗೆ ತೆಗೆದುಕೊಂಡು ಹೋಗುವಂತಿಲ್ಲ.
ಆಸ್ಪತ್ರೆಗೆ ಸೇರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಈ ಹಿನ್ನಲೆಯಲ್ಲಿ ಥಿಯೇಟರ್ ಹಾಗು ಜಿಮ್ ಗಳ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕಿದ್ದೇವೆ. ನಾಳೆಯಿಂದ ಚಿತ್ರಮಂದಿರ, ಜಿಮ್, ಸ್ವಿಮ್ಮಿಂಗ್ ಫೂಲ್ ಶೇಕಡಾ 100 ಹಾಜರಾತಿಯೊಂದಿಗೆ ತೆರೆಯಬಹುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದರು.