
ಮಂಗಳೂರು: ಗಡಿ ಜಿಲ್ಲೆಗಳಲ್ಲಿ ಹಾಗೂ ಕೋರೋನ ಪಾಸಿಟಿವಿಟಿ ದರ ಶೇಕಡಾ 2ಕ್ಕಿಂತ ಹೆಚ್ಚಿದ್ದ ಜಿಲ್ಲೆಗಳಲ್ಲಿ ಹೇರಲಾಗಿದ್ದ ವೀಕೆಂಡ್ ಕರ್ಫ್ಯೂವನ್ನು ಈ ವಾರದಿಂದ ಅನ್ವಯವಾಗುವಂತೆ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಪಾಸಿಟಿವಿಟಿ ದರ ಶೇಕಡ 2ಕ್ಕಿಂತ ಕಡಿಮೆ ಇರುವ ಕಾರಣ ಗಡಿಜಿಲ್ಲೆಗಳ ವಾರಾಂತ್ಯ ಕರ್ಫ್ಯುವನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ. ಆದರೆ ರಾತ್ರಿ ಕರ್ಫ್ಯೂ 9 ಗಂಟೆಯಿಂದ ಬೆಳಗಿನ 5 ಗಂಟೆಯವರೆಗೆ ಎಂದಿನಂತೆ ಮುಂದುವರೆಯಲಿದೆ.
ಈಗಾಗಲೇ ಕೇರಳದಿಂದ ಮಂಗಳೂರು ಜಿಲ್ಲೆಗೆ ಮುಂದಿನ 2 ತಿಂಗಳ ಕಾಲ ತುರ್ತು ಸಂದರ್ಭ ಹೊರತುಪಡಿಸಿ ಪ್ರವೇಶ ನಿಷೇಧಿಸಲಾಗಿದೆ. ಹಾಗೂ ಮಂಗಳೂರಿನಿಂದ ಕೇರಳಕ್ಕೆ ಹೋಗುವುದನ್ನೂ ಎರಡು ತಿಂಗಳ ಕಾಲ ಮುಂದೂಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ವೀಕೆಂಡ್ ಕರ್ಫ್ಯೂ ಬಗ್ಗೆ ಜಿಲ್ಲೆಯ ವರ್ತಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಕೆಲವು ವ್ಯಾಪಾರಿಗಳಿಗೆ ಮಾತ್ರ ಮಧ್ಯಾಹ್ನ 2 ಗಂಟೆ ತನಕ ಅವಕಾಶ ಮಾಡಿಕೊಟ್ಟು ಜವಳಿ, ಪಾದರಕ್ಷೆ ಸೇರಿ ಉಳಿದ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಇದ್ದ ಈ ಹಿಂದಿನ ನಿಯಮವನ್ನು ವಿರೋಧಿಸಿ ವ್ಯಾಪಾರಿಗಳು ಇತ್ತೀಚೆಗೆ ಮಾನವ ಸರಪಳಿ ನಡೆಸುವ ಮೂಲಕ ಪ್ರತಿಭಟಿಸಿದ್ದರು. ಅಲ್ಲದೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಕೂಡ ಇತ್ತೀಚಿಗೆ ವಾರಾಂತ್ಯ ಕರ್ಫ್ಯೂ ರದ್ದುಪಡಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದರು.












































