
ಬೆಂಗಳೂರು: ಸರ್ಕಾರ ಆರಂಭಿಸಿರುವ ಕೆಲವು ಸುಧಾರಣೆಗಳು ಆರಂಭದಲ್ಲಿ ಕಹಿ ಎನಿಸಿದರೂ ನಂತರ ದೇಶಕ್ಕೆ ಪ್ರಯೋಜನಕಾರಿಯಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರು ಭೇಟಿ ವೇಳೆ ಹೇಳಿದ್ದಾರೆ. ಸರ್ಕಾರದ ಹೊಸ ಅಗ್ನಿಪಥ್ ಮಿಲಿಟರಿ ನೇಮಕಾತಿ ಯೋಜನೆಯ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆಗಳ ನಡುವೆ ಮೋದಿಯವರ ಹೇಳಿಕೆಗಳು ಬಂದವು. ಆದರೆ ಪ್ರಧಾನಿಯವರು ತಮ್ಮ ಭಾಷಣದ ವೇಳೆ ಯೋಜನೆಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಎಂಬುದು ವಿಶೇಷ.
“ನಮ್ಮ ಕೆಲವು ಉಪಕ್ರಮಗಳು ಪ್ರಸ್ತುತ ಕಾಲದಲ್ಲಿ ಕಹಿಯಾಗಿ ಕಾಣಿಸಬಹುದು. ಆದರೆ, ಮುಂದಿನ ದಿನಗಳಲ್ಲಿ ಅವು ಫಲ ನೀಡಲಿವೆ. ಸರ್ಕಾರಿ ವಲಯದಷ್ಟೇ ಖಾಸಗಿ ವಲಯವೂ ಮಹತ್ವದ್ದಾಗಿದೆ. ಎರಡೂ ಸಮಾನ ಅವಕಾಶಗಳನ್ನು ನೀಡುತ್ತವೆ. ಆದರೆ, ಜನರ ಮನಸ್ಥಿತಿ ಬದಲಾಗಿಲ್ಲ. ಅವರು ಖಾಸಗಿ ಉದ್ಯಮಗಳ ಬಗ್ಗೆ ಅಷ್ಟು ಚೆನ್ನಾಗಿ ಮಾತನಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಹೇಳಿದರು.
ಇಂದು ಅವರು ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದರು. ರಾಜ್ಯ ರಾಜಧಾನಿಯಲ್ಲಿ 28,000 ಕೋಟಿ ರೂ.ಗೂ ಅಧಿಕ ಮೊತ್ತದ ರೈಲು ಮತ್ತು ರಸ್ತೆ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ನಂತರ ಸಂಜೆ ಮೈಸೂರಿನ ಸುತ್ತೂರು ಮಠದ ಸಂಸ್ಕೃತ ವೇದ ಪಾಠ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.












































