HomeKarnatakaಪಕ್ಷದಿಂದ ಉಚ್ಚಾಟಿಸಿದ್ರೆ ಬಿಜೆಪಿಯ 40 ಸಾವಿರ ಕೋಟಿ ಅವ್ಯವಹಾರದ ದಾಖಲೆ ಬಿಡುಗಡೆ: ಬಿಜೆಪಿಗೆ ಎಚ್ಚರಿಕೆ ನೀಡಿದ...

ಪಕ್ಷದಿಂದ ಉಚ್ಚಾಟಿಸಿದ್ರೆ ಬಿಜೆಪಿಯ 40 ಸಾವಿರ ಕೋಟಿ ಅವ್ಯವಹಾರದ ದಾಖಲೆ ಬಿಡುಗಡೆ: ಬಿಜೆಪಿಗೆ ಎಚ್ಚರಿಕೆ ನೀಡಿದ ಯತ್ನಾಳ್

ಬೆಂಗಳೂರು: ಬಿಜೆಪಿ ಪಕ್ಷೀಯರ ಮೇಲೆಯೇ ವಾಗ್ದಾಳಿ ನಡೆಸುತ್ತಿರುವ ಬಸನಗೌಡ ಪಾಟೀಲ ಯತ್ನಾಳ್ ಇಂದು ಒಂದು ಹೆಜ್ಜೆ ಮುಂದೆ ಹೋಗಿ, ನನ್ನನ್ನು ಪಕ್ಷದಿಂದ ಉಚ್ಚಾಟಿಸಿದ್ರೆ ಬಿಜೆಪಿ ಸರಕಾರದ ಅವಧಿಯ 40 ಸಾವಿರ ಕೋಟಿ ರೂಪಾಯಿ ಅವ್ಯವಹಾರದ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಸನಗೌಡ ಯತ್ನಾಳ್, “ಸತ್ಯ ಹೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್ ಸಮಯದಲ್ಲಿ 40 ಸಾವಿರ ಕೋಟಿ ರೂಪಾಯಿಯ ಅವ್ಯವಹಾರ ನಡೆದಿದೆ” ಎಂದು ಪಕ್ಷದ ಮೇಲೆಯೇ ಗಂಭೀರ ಆರೋಪ ಮಾಡಿದ್ದಾರೆ. ಈ ಮೂಲಕ ಹೈಕಮಾಂಡ್ ಕೆಂಗಣ್ಣಿಗೆ ನೇರವಾಗಿ ಗುರಿಯಾಗುವ ಅಪಾಯವನ್ನು ತನ್ನ ಮೇಲೆ ಎಳೆದುಕೊಂಡಿದ್ದಾರೆ.

“ನಾನು ಇವರಿಗಾಗಿ ಕೆಲಸ ಮಾಡುತ್ತಿಲ್ಲ. ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ನೋಟಿಸ್ ಕೊಟ್ಟು ಪಕ್ಷದಿಂದ ಉಚ್ಚಾಟಿಸಿ ನೋಡಲಿ. ಆಗ ಇವರೆಲ್ಲರ ಬಣ್ಣ ಬಯಲು ಮಾಡುತ್ತೇನೆ. ಕೋವಿಡ್ ಸಂದರ್ಭ 45 ರೂಪಾಯಿ ಮಾಸ್ಕ್ ಗೆ 485 ರೂಪಾಯಿ ಬಿಲ್ ಹಾಕಿದ್ದಾರೆ. ಬೆಡ್‌ಗಳಿಗೆ ಒಂದು ದಿನಕ್ಕೆ 10 ಸಾವಿರ ರೂಪಾಯಿ ಬಾಡಿಗೆ ನೀಡಿದ್ದಾರೆ. ಖರೀದಿ ಮಾಡಿದ್ರೆ ಒಂದು ದಿನದ ಬಿಲ್ ನಲ್ಲಿ ಎರಡು ಬೆಡ್ ಸಿಗುತ್ತಿತ್ತು” ಎಂದು ಯತ್ನಾಳ್ ಆರೋಪಿಸಿದ್ದಾರೆ.

“ನಮ್ಮ ಪಕ್ಷದ ಸರ್ಕಾರ ಇದ್ರೆ ಏನು ಆಯ್ತು? ಕಳ್ಳರು ಕಳ್ಳರೇ ಅಲ್ವಾ? ಸ್ವತಃ ನನಗೆ ಕೋವಿಡ್ ಬಂದಾಗ ಆಸ್ಪತ್ರೆಯಲ್ಲಿ 5 ಲಕ್ಷ ರೂಪಾಯಿ ಬಿಲ್ ಹಾಕಿದ್ದಾರೆ. ಇನ್ನು ಬಡವರು ಏನು ಮಾಡಬೇಕು.” ಎಂದು ಯತ್ನಾಳ್ ಪಕ್ಷದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಮುಂದಿನ ವಾರ ಜನವರಿ 5ಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಹಾಕಿರುವ ಕೇಸ್ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರುತ್ತದೆ. ನಂತರ ಅಪ್ಪಾಜಿಯದ್ದೇ ಹೊರ ತೆಗೆಯುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕೇಸು ಹಾಕುವುದಾಗಿ ಯತ್ನಾಳ್ ಹೇಳಿದ್ದಾರೆ.

ಸದಾ ಯಡಿಯೂರಪ್ಪ ಹಾಗು ಅವರ ಬೆಂಬಲಿಗರ ಮೇಲೆ ಕಿಡಿಕಾರುತ್ತಾ ಬಂದಿರುವ ಯತ್ನಾಳ್ ಬಗ್ಗೆ ಈವರೆಗೆ ಕೇಂದ್ರ ಬಿಜೆಪಿ ಕ್ರಮ ಕೈಗೊಳ್ಳುವ ಗೋಜಿಗೆ ಹೋಗಿಲ್ಲ. ಕನಿಷ್ಠ ಪಕ್ಷ ಎಚ್ಚರಿಕೆ ನೀಡುವ ಕೆಲಸವನ್ನೂ ಮಾಡಲಿಲ್ಲ. ಇದಕ್ಕೆಲ್ಲ ಕೇಂದ್ರ ಬಿಜೆಪಿ ಸಮಿತಿಯಲ್ಲಿರುವ ರಾಜ್ಯದ ನಾಯಕರೊಬ್ಬರ ಹಾಗು ಕೇಂದ್ರ ಸಚಿವರೊಬ್ಬರ ಒತ್ತಾಸೆಯಿದೆ ಎಂದು ಮೊದಲಿನಿಂದಲೂ ಕೇಳಿ ಬರುತ್ತಿರುವ ಮಾತು. ಇದೀಗ ಆ ಒತ್ತಾಸೆ ರಾಜ್ಯದಲ್ಲಿ ಸ್ವತಃ ಮುಳುವಾಗುವ ಸೂಚನೆ ಸಿಗುತ್ತಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಇದು ಬಿಜೆಪಿಗೆ ಸಂಕಟ ತರುವ ಸಾಧ್ಯತೆ ಹೆಚ್ಚಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments