Karnataka

ರಾಜ್ಯಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳಾಗಿ ನಿರ್ಮಲ ಸೀತಾರಾಮನ್, ನವರಸ ನಾಯಕ ಜಗ್ಗೇಶ್ ಫೈನಲ್

ಬೆಂಗಳೂರು: ರಾಜ್ಯದಿಂದ ತೆರವಾದ 4 ರಾಜ್ಯಸಭಾ ಸ್ಥಾನಗಳಲ್ಲಿ ಎರಡು ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಹಾಲಿ ರಾಜ್ಯಸಭಾ ಸದಸ್ಯೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮತ್ತೊಮ್ಮೆ ಟಿಕೆಟ್ ಪಡೆದಿದ್ದಾರೆ. ಬಿಜೆಪಿಯ ಮತ್ತೊಬ್ಬ ರಾಜ್ಯಸಭಾ ಸದಸ್ಯರಾಗಿದ್ದ ಕೆಸಿ ರಾಮಮೂರ್ತಿ ಅವರಿಗೆ ಈ ಬಾರಿ ಟಿಕೆಟ್ ದೊರೆತಿಲ್ಲ. ಬದಲಾಗಿ ಕನ್ನಡ ಚಿತ್ರ ನಟ, ಬಿಜೆಪಿ ಮುಖಂಡ ಜಗ್ಗೇಶ್ ಅವರಿಗೆ ಬಿಜೆಪಿ ಮಣೆ ಹಾಕಿದೆ.

ನಿರ್ಮಲ ಸೀತಾರಾಮನ್ ಅವರನ್ನು ಮರು ಆಯ್ಕೆ ಮಾಡಲು ಬಿಜೆಪಿ ನಿರ್ಧರಿಸಿದ್ದು ಮತ್ತೊಂದು ಬಾರಿಗೆ ನಿರ್ಮಲ ರಾಜ್ಯದಿಂದ ರಾಜ್ಯಸಭೆಗೆ ಹೋಗಲಿದ್ದಾರೆ. ಈ ಹಿಂದೆ ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಕನ್ನಡ ಚಿತ್ರ ನಟ ಜಗ್ಗೇಶ್ ಅವರಿಗೆ ತನ್ನ ಎರಡನೇ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್ ನೀಡಿದೆ. ಈ ಮೂಲಕ ನವರಸ ನಾಯಕ ಸಂಸತ್ತಿಗೆ ಪ್ರವೇಶ ಪಡೆಯಲಿದ್ದಾರೆ. ಹಲವು ಚುನಾವಣೆಗಳಲ್ಲಿ ಪಕ್ಷದ ಪರ ಸ್ಟಾರ್ ಪ್ರಚಾರಕರಾಗಿ ಪ್ರಚಾರ ನಡೆಸಿದ್ದ ಜಗ್ಗೇಶ್ ಅವರಿಗೆ ಪಕ್ಷ ಈ ಮೂಲಕ ಕೊಡುಗೆ ನೀಡಿದೆ.

ತನ್ನ ಸದಸ್ಯ ಬಲದ ಆಧಾರದ ಮೇಲೆ ಬಿಜೆಪಿ ೨ ಅಭ್ಯರ್ಥಿಗಳನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳಲಿದೆ. ಕಾಂಗ್ರೆಸ್ ಒಂದು ಅಭ್ಯರ್ಥಿ ಆಯ್ಕೆ ಮಾಡುವಷ್ಟು ಸದಸ್ಯ ಬಲ ಹೊಂದಿದೆ. ಆದರೆ ಜೆಡಿಎಸ್ ಮಾತ್ರ ತನ್ನ ಅಭ್ಯರ್ಥಿ ಗೆಲ್ಲಿಸಲು ಬಿಜೆಪಿಯ ಹೆಚ್ಚುವರಿ ಮತಗಳನ್ನು ನೆಚ್ಚಿಕೊಳ್ಳಬೇಕಾಗಿದೆ. ಮೂರನೇ ಅಭ್ಯರ್ಥಿಯನ್ನು ಕಣ್ಣಕಿಳಿಸದೆ ಬಿಜೆಪಿ ಜೆಡಿಎಸ್ ಅಭ್ಯರ್ಥಿಗೆ ತನ್ನ ಹೆಚ್ಚುವರಿ ಮತಗಳನ್ನು ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಇತ್ತೀಚಿಗೆ ದೇವೇಗೌಡರು ಬಿಜೆಪಿ ಕೇಂದ್ರ ನಾಯಕರಲ್ಲಿ ಮನವಿ ಮಾಡಿದ್ದರು.

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಶಾಸಕರ ಮತಗಳ ಅಗತ್ಯವಿದೆ. ಪ್ರಸ್ತುತ ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ 120, ಕಾಂಗ್ರೆಸ್ 70, ಜೆಡಿಎಸ್ 32 ಮತ್ತು ಪಕ್ಷೇತರ ಶಾಸಕರಿದ್ದಾರೆ.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

Exit mobile version