Political

ಕರ್ನಾಟಕ: ತೆರವಾದ 4 ರಾಜ್ಯಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮೂರು ಪಕ್ಷಗಳಲ್ಲಿ ನಿಲ್ಲದ ಕಸರತ್ತು

ಬೆಂಗಳೂರು: ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗುವ ನಾಲ್ಕು ಸ್ಥಾನಗಳು ತೆರವಾಗುತ್ತಿದ್ದಂತೆ ಎಲ್ಲಾ ಮೂರು ಪಕ್ಷಗಳಾದ ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ತಮ್ಮ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಸರತ್ತು ನಡೆಸುತ್ತಿವೆ.

ಮೂಲಗಳ ಪ್ರಕಾರ ಬಿಜೆಪಿ ತನ್ನ ಇಬ್ಬರು ಅಭ್ಯರ್ಥಿಗಳನ್ನು ಅನಾಯಾಸವಾಗಿ ಗೆಲ್ಲಿಸಿಕೊಳ್ಳಲಿದ್ದು ಹೆಚ್ಚುವರಿ ಅಭ್ಯರ್ಥಿಯನ್ನು ಹಾಕಿ ಒಟ್ಟು ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಯಸಿದ್ದು, ಜೆಡಿಎಸ್ ಅಭ್ಯರ್ಥಿ ಗೆಲುವು ಕಷ್ಟವಾಗುವಂತಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಬಿಜೆಪಿ ವರಿಷ್ಠರೊಡನೆ ಮಾತನಾಡಿ, ಜೆಡಿಎಸ್‌ಗೆ ಒಬ್ಬರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವಂತೆ ಮೂರನೇ ಅಭ್ಯರ್ಥಿಯನ್ನು ಹಾಕಬೇಡಿ ಎಂದು ವಿನಂತಿಸಿದ್ದಾರೆ ಎನ್ನಲಾಗಿದೆ.

ಕರ್ನಾಟಕದಿಂದ ಜೈರಾಮ್ ರಮೇಶ್ ಅವರನ್ನು ಕಾಂಗ್ರೆಸ್ ಮತ್ತೊಮ್ಮೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ. ಬಿಜೆಪಿಯು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಪುನರಾವರ್ತಿಸುವುದು ಖಚಿತವಾಗಿದೆ. ಬಿಜೆಪಿಯ ಮತ್ತೊಂದು ಅಭ್ಯರ್ಥಿ ಯಾರಾಗಲಿದ್ದಾರೆ ಹಾಗು ಹೆಚ್ಚುವರಿ ಮೂರನೇ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಬಗ್ಗೆ ಕುತೂಹಲ ಇದೆ. ಗೆಲ್ಲಲು ಬಿಜೆಪಿ ಅಥವಾ ಕಾಂಗ್ರೆಸ್ಸಿನ ಹೆಚ್ಚುವರಿ ಮತಗಳನ್ನು ನೆಚ್ಚಿಕೊಂಡಿರುವ ಜೆಡಿಎಸ್ ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅವರತ್ತ ಒಲವು ಹೊಂದಿದೆ. ಬಿಜೆಪಿ ಇಬ್ಬರು, ಕಾಂಗ್ರೆಸ್ ಒಬ್ಬರು ಮತ್ತು ಜೆಡಿಎಸ್ ಒಬ್ಬರನ್ನು ಕಣಕ್ಕಿಳಿಸಿದರೆ, ಎಲ್ಲಾ 4 ಅಭ್ಯರ್ಥಿಗಳು ಚುನಾವಣೆಯಿಲ್ಲದೆ ಅವಿರೋಧವಾಗಿ ಆಯ್ಕೆಯಾಗುತ್ತಾರೆ. ಆದರೆ ಬಿಜೆಪಿ ಮೂರನೇ ಅಥವಾ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಇಳಿಸಿದರೆ ಚುನಾವಣೆ ನಡೆಯುವುದು ಅನಿವಾರ್ಯವಾಗಲಿದೆ. ಆದರೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಆ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿಗೆ ಕನಿಷ್ಠ 15 ಮತಗಳ ಕೊರತೆ ಆಗಲಿದ್ದು ಅದಕ್ಕಾಗಿ ಜೆಡಿಎಸ್ ನ ಬಿಜೆಪಿ ಪರ ಒಲವಿರುವ ಮತಗಳನ್ನು ಸೆಳೆಯಬೇಕಾಗುತ್ತದೆ.

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಪ್ರತಿ ಅಭ್ಯರ್ಥಿಗೆ 45 ಶಾಸಕರ ಮತಗಳ ಅಗತ್ಯವಿದೆ. ಪ್ರಸ್ತುತ ರಾಜ್ಯ ವಿಧಾನ ಸಭೆಯಲ್ಲಿ ಬಿಜೆಪಿ 120, ಕಾಂಗ್ರೆಸ್ 70, ಜೆಡಿಎಸ್ 32 ಮತ್ತು ಪಕ್ಷೇತರ ಶಾಸಕರಿದ್ದಾರೆ.

Exit mobile version