Karnataka

ಕರ್ನಾಟಕ ರಾಜ್ಯಸಭೆ ಸ್ಥಾನ: ಬಿಜೆಪಿಗೆ ಬಂಪರ್, ಕಾಂಗ್ರೆಸ್ 1, ಜೆಡಿಎಸ್ ಶೂನ್ಯ

ಬೆಂಗಳೂರು: ಕರ್ನಾಟಕದಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಇಂದು (ಶುಕ್ರವಾರ) ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಬಂಪರ್ ಹೊಡೆದಿದ್ದು ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದ ಒಂದು ಸ್ಥಾನ ಕಾಂಗ್ರೆಸ್ ಪಾಲಾಗಿದ್ದು ಜೆಡಿಎಸ್ ಶೂನ್ಯ ಸಂಪಾದಿಸಿದೆ.

ಶಾಸಕರ ಸಂಖ್ಯಾನುಸಾರ ಬಿಜೆಪಿ 2, ಕಾಂಗ್ರೆಸ್ 1, ಹಾಗು ಇತರೆ ಪಕ್ಷಗಳ ಹೆಚ್ಚುವರಿ ಮತದ ಬೆಂಬಲದೊಂದಿಗೆ ಜೆಡಿಎಸ್ ಒಂದು ಸ್ಥಾನ ಗೆಲ್ಲುವ ಸಾಧ್ಯತೆ ಇತ್ತು. ಆದರೆ ಕಾಂಗ್ರೆಸ್ ತನ್ನ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪೈಪೋಟಿ ನೀಡಿತು. ಅದಕ್ಕೆ ತಕ್ಕುದಾದ ತಂತ್ರ ಹೆಣೆದ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಸ್ ಕಾಂಗ್ರೆಸ್ಸಿನ ಕಚ್ಚಾಟದ ಲಾಭ ಪಡೆಯಿತು.

ಬಿಜೆಪಿಯ ನಿರ್ಮಲ ಸೀತಾರಾಮನ್ 46, ಜಗ್ಗೇಶ್ 44, ಕಾಂಗ್ರೆಸ್ಸಿನ ಜೈ ರಾಮ್ ರಮೇಶ್ 46, ಹಾಗು ನಾಲ್ಕನೇ ಅಭ್ಯರ್ಥಿಯಾಗಿ ಗೆದ್ದ ಬಿಜೆಪಿಯ ಲೆಹರ್ ಸಿಂಗ್ 33 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ವಿಜಯಿಯಾದರು. ಬಿಜೆಪಿಗೆ ಇಬ್ಬರು ಪಕ್ಷೇತರ ಶಾಸಕರುಗಳಾದ ಮಹೇಶ್ ಹಾಗು ನಾಗೇಶ್ ಅವರ ಬೆಂಬಲ ದೊರಕಿತ್ತು. ಜತೆಗೆ ಒಂದು ಮತ ಜೆಡಿಎಸ್ ಪಕ್ಷದಿಂದ ಕ್ರಾಸ್ ವೋಟಿಂಗ್ ಆಗಿದ್ದು ಲಾಭ ತಂದು ಕೊಟ್ಟಿತು.

ಚುನಾವಣೆಯಲ್ಲಿ ಸೋತ ಜೆಡಿಎಸ್’ನ ಕುಪೇಂದ್ರ ರೆಡ್ಡಿ 30 ಮತಗಳಿಗೆ ಸೀಮಿತರಾದರೆ, ಕಾಂಗ್ರೆಸ್ಸಿನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ 25 ಮತ ಗಳಿಸಿ ಸೋಲು ಕಂಡರು.

Exit mobile version