Karnataka

ಕರ್ನಾಟಕದಿಂದ 4 ರಾಜ್ಯಸಭೆ ಸ್ಥಾನಗಳಿಗೆ ಇಂದು ಮತದಾನ: 4ನೇ ಅಭ್ಯರ್ಥಿ ಗೆಲುವಿನ ಬಗ್ಗೆ ಕುತೂಹಲ

ಬೆಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ರಾಜ್ಯಸಭೆಯ ಒಟ್ಟು16 ಸ್ಥಾನಗಳಿಗೆ ಇಂದು ಶುಕ್ರವಾರ(ಜೂನ್ 10) ಮತದಾನ ನಡೆಯಲಿದ್ದು, ಇದರಲ್ಲಿ ಕರ್ನಾಟಕದ 4 ಸ್ಥಾನಗಳೂ ಸೇರಿವೆ. ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ 2, ಕಾಂಗ್ರೆಸ್ ಒಬ್ಬರನ್ನು ಅನಾಯಾಸವಾಗಿ ಗೆಲ್ಲಿಸಬಹುದಾಗಿದ್ದು 4ನೇ ಸದಸ್ಯರ ಆಯ್ಕೆ ಬಗ್ಗೆ ಕುತೂಹಲ ಮನೆ ಮಾಡಿದೆ.

4ನೇ ಸ್ಥಾನಕ್ಕಾಗಿ ಬಿಜೆಪಿ ಹಾಗು ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಇದು ಜೆಡಿಸ್ ಗೆ ಮರ್ಮಾಘಾತ ನೀಡಿದೆ. ನಾಲ್ಕನೇ ಸ್ಥಾನಕ್ಕಾಗಿ ಮೂವರು ಅಭ್ಯರ್ಥಿಗಳು ಪೈಪೋಟಿಗೆ ಇಳಿದಿರುವ ಕಾರಣ ಗೆಲುವು ಯಾರಿಗೆ ಒಲಿಯಲಿದೆ ಎಂಬುದು ನೂರು ಡಾಲರ್ ಪ್ರಶ್ನೆಯಾಗಿ ಉಳಿದಿದೆ. ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಕ್ರಾಸ್ ವೋಟಿಂಗ್ ಅನಿವಾರ್ಯವಾಗಿದ್ದು ಯಾವ ಪಕ್ಷದವರು ಯಾವ ಪಕ್ಷದ ಅಭ್ಯರ್ಥಿಗೆ ಮತ ಹಾಕಲಿದ್ದಾರೆ ಕಾದು ನೋಡಬೇಕಾಗಿದೆ. ಬಿಜೆಪಿ ಎರಡನೇ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸುವ ಯೋಜನೆ ಹಾಕಿಕೊಂಡಿದೆ. ಆಯಾ ಪಕ್ಷದವರು ಕ್ರಾಸ್ ವೋಟಿಂಗ್ ಮಾಡದೇ ಇದ್ದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಪಕ್ಕಾ ಆಗಲಿದೆ. ಈ ಮಧ್ಯೆ ಕಾಂಗ್ರೆಸಿನ ಮೊದಲ ಅಭ್ಯರ್ಥಿ ಜೈ ರಾಮ್ ರಮೇಶ್ ಸೋತು ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲ್ಲಲಿದ್ದಾರೆ ಎಂಬ ಮಾತುಗಳೂ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಕ್ರಾಸ್ ವೋಟಿಂಗ್ ಭೀತಿಯ ನಡುವೆ ಇಂದು ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಸಂಜೆ 6 ಗಂಟೆಯವರೆಗೆ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ನಂತರ ಫಲಿತಾಂಶ ಪ್ರಕಟವಾಗಲಿದೆ.

ಬಿಜೆಪಿಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್, ಕಾಂಗ್ರೆಸ್ ನಿಂದ ಜೈರಾಮ್ ರಮೇಶ್, ಮನ್ಸೂರ್ ಆಲಿ ಖಾನ್, ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

Exit mobile version