
ಬೆಂಗಳೂರು: ನಾಗವಾರ ಬಳಿ ಮಂಗಳವಾರ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಹಠಾತ್ ಕುಸಿದುಬಿದ್ದ ಪರಿಣಾಮ ತಾಯಿ ಹಾಗೂ ಎರಡು ವರ್ಷದ ಮಗು ಮೃತಪಟ್ಟಿದ್ದು, ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿದೆ.
ಮೆಟ್ರೋ ಪಿಲ್ಲರ್ ಕುಸಿದು ಬಿದ್ದು ಇಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಒತ್ತಾಯಿಸಿದ್ದಾರೆ. “ಕರ್ನಾಟಕ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ಇದು ಕಳಪೆ ಕಾಮಗಾರಿಗೆ ಸ್ಪಷ್ಟ ಉದಾಹರಣೆಯಾಗಿದೆ. ರಾಜ್ಯ ಸರ್ಕಾರದ ಕಳಪೆ ಕಾಮಗಾರಿಯಿಂದ ಬೆಂಗಳೂರು ಮತ್ತು ರಾಜ್ಯದ ಜನ ಬೇಸತ್ತಿದ್ದಾರೆ” ಎಂದು ಶಾಸಕಿ ಸೌಮ್ಯಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಈ ಮಧ್ಯೆ ಮೆಟ್ರೋ ಪಿಲ್ಲರ್ ಕುಸಿತದಿಂದ ಮೃತರಾದ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 20 ಲಕ್ಷ ಹಾಗು ಬಿಎಂಆರ್ ಸಿಎಲ್ ನಿಂದ 20 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಲಾಗಿದೆ.












































