Karnataka

ಕೋಟಿ ಕೋಟಿ ದುಡ್ಡು ಪಡೆದು ಮುಷ್ಕರ ವಾಪಾಸ್: ಕಳಚಿತು ಕೋಡಿಹಳ್ಳಿ ಚಂದ್ರಶೇಖರ್ ‘ರೈತ ನಾಯಕ’ ಮುಖವಾಡ

ಬೆಂಗಳೂರು: ಸದಾ ರೈತರ ಪರ ಎಂದು ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಾ, ರೈತ ನಾಯಕ ಮುಖವಾಡ ಧರಿಸಿ ಮುಷ್ಕರ, ಬಂದ್ ನಡೆಸಿ ಹೋರಾಟಗಾರ ಎನಿಸಿಕೊಂಡಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರ ಮುಖವಾಡವನ್ನು ಕನ್ನಡ ಟಿವಿ ಮಾಧ್ಯಮವಾದ ಪವರ್ ಟಿವಿ ಸ್ಟಿಂಗ್ ಆಪರೇಷನ್ ಮೂಲಕ ಬಯಲು ಮಾಡಿದೆ.

ಹಿಂದಿನ ಯಡಿಯೂರಪ್ಪ ಸರಕಾರದ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ ಮೂರು ನಿಗಮಗಳ ನೌಕರರು ತಮ್ಮನ್ನು ಸರಕಾರಿ ನೌಕರರು ಎಂದು ಪರಿಗಣಿಸಬೇಕೆಂದು ನಡೆಸಿದ್ದ ಹಲವು ದಿನಗಳ ಮುಷ್ಕರ ಸಂದರ್ಭ ಮುಷ್ಕರ ನಿಲ್ಲಿಸಲು ಕೋಡಿಹಳ್ಳಿ ಚಂದ್ರಶೇಖರ್ 35 ಕೋಟಿ ರೂ ಹಣ ಪಡೆದು ಹೋರಾಟ ವಾಪಾಸ್ ಪಡೆದಿದ್ದಾರೆಂದು ಸ್ಟಿಂಗ್ ಆಪರೇಷನ್ ಮೂಲಕ ಬಯಲಾಗಿದೆ. ರೈತ ನಾಯಕನಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೆ.ಎಸ್.ಆರ್.ಟಿ.ಸಿ ನೌಕರರ ಸಂಘ (ಚಂದ್ರಶೇಖರ್ ಬಣ)ದವರು ತಮ್ಮ ಹೋರಾಟಕ್ಕೆ ಬಲ ತುಂಬಲು ವೃತ್ತಿ ಸಂಬಂಧವೇ ಇಲ್ಲದಿದ್ದರೂ ಸಂಘದಲ್ಲಿ ಗೌರವಾಧ್ಯಕ್ಷ ಹುದ್ದೆ ನೀಡಿದ್ದರು. ಮತ್ತೊಂದೆಡೆ ಅನಂತ್ ಸುಬ್ಬರಾವ್ ನೇತೃತ್ವದ ಕೆ.ಎಸ್.ಆರ್.ಟಿ.ಸಿ ನೌಕರರ ಫೆಡೆರೇಶನ್ (ಅಧಿಕೃತ ಸಂಘ) ಕೋಡಿಹಳ್ಳಿ ಬಣದಿಂದ ಅಂತರ ಕಾಯ್ದುಕೊಂಡಿತ್ತು. ಕೋಡಿಹಳ್ಳಿ ಕೆ.ಎಸ್.ಆರ್.ಟಿ.ಸಿ ನೌಕರರ ಸಂಘದ ಗೌರವಾಧ್ಯಕ್ಷ ಹುದ್ದೆ ವಹಿಸಿಕೊಂಡ ಮೇಲೆ ಮುಷ್ಕರ ಮತ್ತಷ್ಟು ತಾರಕಕ್ಕೆ ಹೋಗಿತ್ತು. ರಾಜ್ಯದ ಎಲ್ಲೆಡೆ ಪ್ರಯಾಣಿಕರು ಬಸ್ ಸೌಕರ್ಯ ಇಲ್ಲದೆ ಪಡಬಾರದ ಪಾಡು ಪಟ್ಟಿದ್ದರು. ಅಲ್ಲದೆ ಸ್ವತಃ ಮುಷ್ಕರ ನಿರತ ನೌಕರರು ಕೂಡ ಕೆಲಸದಿಂದ ಅಮಾನತಾಗಿದ್ದರು.

ಕೋಡಿಹಳ್ಳಿ ಚಂದ್ರಶೇಖರ್ ಹೋರಾಟವನ್ನು ತಾರಕಕ್ಕೆ ಕೊಂಡೊಯ್ದು ನಂತರ ಹೋರಾಟ ನಿಲ್ಲಿಸಲು ಡೀಲ್ ನಡೆಸಿದ್ದಾರೆಂದು ಈಗ ಬಯಲಾಗಿದ್ದು ಬರೋಬ್ಬರಿ 35 ಕೋಟಿ ಪಡೆದಿದ್ದಾರೆಂದು ಪವರ್ ಟಿವಿ ವರದಿ ಮಾಡಿದೆ. ಹಾಗೆಯೇ ದೆಹಲಿಯಲ್ಲಿ ಕೇಂದ್ರ ಸರಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ರೈತ ಹೋರಾಟ ಒಂದು ಹಣ ಮಾಡುವ ಪ್ರಾಜೆಕ್ಟ್ ಆಗಿತ್ತು ಅನ್ನುವುದು ಕೂಡ ಬಹಿರಂಗಗೊಂಡಿದೆ. ರಾಕೇಶ್ ಟಿಕಾಯತ್ ಸಹಚರರೊಂದಿಗೆ ನಡೆದ 3000 ಕೋಟಿ ಡೀಲ್ ಕುದುರಿಸುವ ಬಗ್ಗೆಯೂ ಕೋಡಿಹಳ್ಳಿ ಮಾತನಾಡಿರುವುದು ಹಲವು ಸಂದೇಹಗಳಿಗೆ ಎಡೆ ಮಾಡಿದೆ. ಈ ಎಲ್ಲದರ ಬಗ್ಗೆ ವಿಸ್ತಾರವಾದ ತನಿಖೆ ನಡೆದು ಡೀಲ್ ಸತ್ಯಾಸತ್ಯತೆ ಹೊರಬರಬೇಕಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd

Exit mobile version