
ಮುಂಬೈ: ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಬಾಲಿವುಡ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ದೊರೆತಿದೆ. ಎನ್‌ಸಿಬಿ ತಂಡವು ಆರ್ಯನ್ ಖಾನ್ ಹಾಗೂ ಮೊಹಕ್ ಗೆ ಕ್ಲೀನ್ ಚಿಟ್ ನೀಡಿದ್ದು, ಆರ್ಯನ್ ಮತ್ತು ಮೋಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಮಾದಕ ವಸ್ತು ಹೊಂದಿದ್ದರು ಎಂದು ಹೇಳಿದೆ. ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆದಿದ್ದರು.
ಈ ಬಗ್ಗೆ ಹೇಳಿಕೆ ನೀಡಿದ ಎನ್‌ಸಿಬಿ ಡಿಡಿಜಿ ಸಂಜಯ್ ಕುಮಾರ್ ಸಿಂಗ್, ‘ಕಾರ್ಡೆಲಿಯಾ ಡ್ರಗ್ ಬಸ್ಟ್ ಪ್ರಕರಣದಲ್ಲಿ ಆರ್ಯನ್ ಖಾನ್, ಅವಿನ್ ಸಾಹು ಮತ್ತು ಇತರ 4 ಕಾರ್ಯಕ್ರಮ ಸಂಘಟಕರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ.
ಶಾರುಖ್ ಖಾನ್ ಪುತ್ರನ ವಿರುದ್ಧ ಯಾವುದೇ ಸಾಕ್ಸ್ಯಗಳು ಸಿಕ್ಕಿಲ್ಲ ಎಂದು ಎನ್‌ಸಿಬಿಯ ವಿಶೇಷ ತನಿಖಾ ತಂಡ ಈ ಹಿಂದೆ ಹೇಳಿತ್ತು. ಆರಂಭದಲ್ಲಿ ಎನ್‌ಸಿಬಿ ಮುಂಬೈ ತಂಡ ತನಿಖೆ ನಡೆಸಿತ್ತು. ಆದರೆ ಪ್ರಕರಣದ ಬಗ್ಗೆ ರಾಜಕೀಯ ಆರೋಪಗಳು ಕೇಳಿಬಂದ ನಂತರ ಅದನ್ನು ನವೆಂಬರ್ 6, 2021 ರಂದು ಡಿಡಿಜಿ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ದೆಹಲಿ ಪ್ರಧಾನ ಕಛೇರಿಯಿಂದ ಎಸ್‌ಐಟಿ ವಹಿಸಿಕೊಂಡಿತ್ತು.