
ಬೆಂಗಳೂರು: ಮಸೀದಿಗಳಲ್ಲಿ ಮೈಕ್ ಮೂಲಕ ಆಜಾನ್ ಕೂಗುವುದರ ಕುರಿತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಎದ್ದಿರುವ ಹೊರಾಟ ತೀವ್ರಗೊಂಡಿದ್ದು ಇದೀಗ ಹಿಂದೂಗಳು ಇದಕ್ಕೆ ಪ್ರತಿತಂತ್ರವನ್ನು ಹೂಡಿದ್ದಾರೆ. ಹಿಂದೂ ಬಾಂಧವರು ಹಾಗು ಹಿಂದೂ ಪರ ಸಂಘಟನೆಗಳಿಂದ ಇಂದು ಮುಂಜಾನೆ 5 ಗಂಟೆಗೆ ದೇವಾಲಯಗಳಲ್ಲಿ ಮೈಕ್ ಮೂಲಕ ಸುಪ್ರಭಾತ, ಭಕ್ತಿಗೀತೆ ಮೊಳಗಿದೆ.
ರಾಜ್ಯದ ಬೆಂಗಳೂರು, ಮೈಸೂರು, ಮಂಡ್ಯ, ಕಲಬುರಗಿ, ಬೆಳಗಾವಿ, ಧಾರವಾಡ ಸೇರಿ ಹಲವು ಪ್ರದೇಶಗಳ ದೇವಸ್ಥಾನಗಳಲ್ಲಿ ಮುಂಜಾನೆಯ ಆಜಾನ್ ಕೂಗುವ ವೇಳೆಗೆ ಸರಿಯಾಗಿ ಹನುಮಾನ್ ಚಾಲೀಸಾ, ಭಜನೆ, ಮಂತ್ರಪಠಣ, ಮಂತ್ರ ಘೋಷಣೆ ಕೇಳಿಬಂದಿತು. ಇಂದು ಮುಂಜಾನೆ ಮೈಸೂರಿನ ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸ್ ಮೊಳಗಿಸಲಾಯಿತು. ಬೆಂಗಳೂರಿನ ನೀಲಸಂದ್ರದ ಆಂಜನೇಯ ಸ್ವಾಮಿ ದೇವಾಲಯದ ಬಳಿ ವಾಗ್ವಾದ ನಡೆದು ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆಯಿತು. ಪೊಲೀಸರ ಈ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಈ ಬಗ್ಗೆ ಮಾತನಾಡಿದ ಶ್ರೀರಾಮ ಸೇನೆಯ ನೇತಾರ ಪ್ರಮೋದ್ ಮುತಾಲಿಕ್, “ಇದು ಪಾಕಿಸ್ತಾನ, ಅಪ್ಘಾನಿಸ್ತಾನ ಅಲ್ಲ. ಮಸೀದಿಗಳ ಮೇಲಿನ ಆಜಾನ್ ಮೈಕ್ ತೆರವುಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದ್ದು ಇದು ಸರಿಯಲ್ಲ. ಇದು ಸಂಜೆ ಒಳಗೆ ಮೈಕ್ ಗಳನ್ನು ತೆರವುಗೊಳಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.












































