Karnataka

ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ: ಹೈಕೋರ್ಟ್ ಆದೇಶದ 4 ಪ್ರಮುಖ ಅಂಶಗಳು ಯಾವುವು?

ಬೆಂಗಳೂರು: ಭಾರೀ ಗೊಂದಲಕ್ಕೆ ಕಾರಣವಾಗಿದ್ದ ಹಿಜಾಬ್ ಪ್ರಕರಣಕ್ಕೆ ಹೈಕೋರ್ಟ್ ತೆರೆ ಎಳೆದಿದ್ದು ಸಮವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿದೆ. ಈ ಮೂಲಕ ಸಮವಸ್ತ್ರ ಕಡ್ಡಾಯಗೊಳಿಸಿದ ರಾಜ್ಯ ಸರಕಾರದ ಆದೇಶಕ್ಕೆ ಜಯ ದೊರಕಿದ್ದು ರಾಜ್ಯದ ವಿದ್ಯಾರ್ಥಿಗಳು ನೆಮ್ಮದಿಯಿಂದ ಶಾಲಾ ಕಾಲೇಜಿಗೆ ಹಾಜರಾಗುವಂತಾಗಿದೆ. ಸರ್ಕಾರದ ಆದೇಶ ಕಾನೂನುಬದ್ಧವಾಗಿದ್ದು, ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಸಮವಸ್ತ್ರವನ್ನು ಕಡ್ಡಾಯ ಮಾಡುವುದು ಸಂವಿಧಾನದ 19(1)(ಎ) ಮತ್ತು 25ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ. ಮತ್ತು ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ಹೈಕೋರ್ಟ್ ನ ತ್ರಿಸದಸ್ಯ ಪೀಠ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಹಿಜಾಬ್ ಕುರಿತ ಅರ್ಜಿಯನ್ನು ವಜಾಗೊಳಿಸಿದೆ.

ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ತಿ, ನ್ಯಾಯಮೂರ್ತಿಗಳಾದ ಕೃಷ್ಣ ದೀಕ್ಷಿತ್ ಸೇರಿದಂತೆ ಮೂವರು ನ್ಯಾಯಾಧೀಶರನ್ನೊಳಗೊಂಡ ತ್ರಿಸದಸ್ಯ ಪೀಠ ಮಂಗಳವಾರ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ನೀಡಿದ ಅಂತಿಮ ತೀರ್ಪು 129 ಪುಟಗಳನ್ನು ಹೊಂದಿದ್ದು ಈ ಸುದೀರ್ಘ ಆದೇಶದಲ್ಲಿ ಹೈಕೋರ್ಟ್ ಉತ್ತರಿಸಿದ 4 ಪ್ರಮುಖ ಅಂಶಗಳು ಈ ರೀತಿಯಾಗಿವೆ.

1) ಆರ್ಟಿಕಲ್ 25ರ ಅಡಿಯಲ್ಲಿ ಹಿಜಾಬ್ ಅನ್ನು ಇಸ್ಲಾಂನ ಅತ್ಯಗತ್ಯ ಭಾಗ ಎಂದು ಪರಿಗಣಿಸಲಾಗಿದೆಯೇ ಎನ್ನುವ ಕುರಿತು ಆದೇಶದಲ್ಲಿ ಉಲ್ಲೇಖಿಸಿದ ಹೈಕೋರ್ಟ್ ಪೀಠ ಹಿಜಾಬ್ ಧರಿಸೋದು ಇಸ್ಲಾಂ ಆಚರಣೆಯ ಅತ್ಯಗತ್ಯ ಭಾಗ ಅಲ್ಲ ಪರಿಗಣಿಸಿದೆ. ಕುರಾನ್ ಅಲ್ಲಿರೋ ಅಂಶಗಳು, ವಿವಿಧ ಕೋರ್ಟ್ ತೀರ್ಪುಗಳನ್ನು ಪರಿಗಣಿಸುವ ಮೂಲಕ ಪೀಠ ಈ ಮಾತನ್ನು ಹೇಳಿದ್ದು, ಈ ಮೂಲಕ ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗ ಎಂದು ವಾದಿಸಿದ್ದ ಹಿಜಾಬ್ ಪರ ಅರ್ಜಿದಾರರ ಹೇಳಿಕೆಯನ್ನು ತಳ್ಳಿಹಾಕಿದೆ.

2) ಶಾಲಾ ಸಮವಸ್ತ್ರ ಸಾಂವಿಧಾನಿಕವಾಗಿ ಅನುಮತಿಸುವ ಸಮಂಜಸ ನಿರ್ಬಂಧ ಆಗಿದೆ. ಇದನ್ನು ವಿದ್ಯಾರ್ಥಿಗಳು ವಿರೋಧಿಸಲು ಅವಕಾಶವಿಲ್ಲ. ಶಾಲೆ ಸೂಚಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಧರಿಸಬೇಕು.

3) ಇನ್ನು ಸಮವಸ್ತ್ರ ಕಡ್ಡಾಯಗೊಳಿಸಿ ಫೆಬ್ರುವರಿ 5, 2022ರಂದು ರಾಜ್ಯ ಸರಕಾರ ಹೊರಡಿಸಿದ ಆದೇಶ ಯಾವುದೇ ಸಂವಿಧಾನ ವಿರೋಧಿಯಲ್ಲ. ಸರಕಾರಕ್ಕೆ ಆದೇಶ ಹೊರಡಿಸುವ ಅಧಿಕಾರ ಇದೆ ಎಂದು ಕೋರ್ಟ್ ಹೇಳಿದೆ. ಮತ್ತು ಇದನ್ನು ರದ್ದು ಮಾಡುವ ಯೋಚನೆ ನಮ್ಮಲಿಲ್ಲ ಎಂದು ತಮ್ಮಅಂತಿಮ ಆದೇಶದಲ್ಲಿ ಪೀಠ ಹೇಳಿದೆ.

4) ಉಡುಪಿ ಬಾಲಕಿಯರ ಕಾಲೇಜಿನ ಪ್ರಾಂಶುಪಾಲರು, 8 ಉಪನ್ಯಾಸಕರ ವಿರುದ್ಧ ಶಿಸ್ತುಕ್ರಮಕ್ಕೆ ಆದೇಶ ಸಾಧ್ಯವಿಲ್ಲ ಮತ್ತು ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಘುಪತಿ ಭಟ್ ಹಾಗು ಉಪಾಧ್ಯಕ್ಷ ಯಶಪಾಲ್ ಸುವರ್ಣ ಅವರ ವಿರುದ್ಧ ಕೋ ವಾರಂಟೋದ ರಿಟ್ ಜಾರಿ ಸಾಧ್ಯವಿಲ್ಲ ಎಂದು ಹೈಕೋರ್ಟ್ ಅರ್ಜಿದಾರರ ಮನವಿಯನ್ನು ತಳ್ಳಿ ಹಾಕಿದೆ.

2004ರಿಂದ ಇಲ್ಲಿಯವರೆಗೆ ಉಡುಪಿ ಬಾಲಕಿಯರ ಕಾಲೇಜಿನಲ್ಲಿ ಇಲ್ಲದ ಸಮವಸ್ತ್ರ ಗೊಂದಲ ಶೈಕ್ಷಣಿಕ ವರ್ಷದ ಮಧ್ಯಭಾಗದಲ್ಲಿ ಒಮ್ಮೆಲೇ ಆರಂಭವಾಗಲು ಏನು ಕಾರಣ?. ಸಮಾಜದಲ್ಲಿ ಅಶಾಂತಿ ಸೃಷ್ಟಿಸೋಕೆ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಈ ಬಗ್ಗೆ ಈಗ ನಾವು ಯಾವುದೇ ಹೇಳಿಕೆ ನೀಡಲು ಹೋಗುವುದಿಲ್ಲ. ಇದರಿಂದ ಪೊಲೀಸರು ನಡೆಸುತ್ತಿರುವ ತನಿಖೆಗೆ ತೊಂದರೆಯಾಗುವುದು ನಮಗೆ ಇಷ್ಟವಿಲ್ಲ. ಪೊಲೀಸರು ನಡೆಸುತ್ತಿರುವ ತನಿಖೆ ಆದಷ್ಟು ಬೇಗ ನಡೆದು ಅಪರಾಧಿಗಳನ್ನು ಹಿಡಿಯಲಿ ಎಂಬ ನಿರೀಕ್ಷೆ ಮಾಡುತ್ತೇವೆ ಎಂದು ಹೈಕೋರ್ಟ್ ತ್ರಿ ಸದಸ್ಯ ಪೀಠ ಹೇಳಿದೆ.

Exit mobile version