
ಬೆಂಗಳೂರು: ಬುಧವಾರ ಏಕಸದಸ್ಯ ಪೀಠದಿಂದ ವಿಸ್ತ್ರತ ಪೀಠಕ್ಕೆ ವರ್ಗಾವಣೆಯಾದ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈ ಕೋರ್ಟ್ ಶಿಕ್ಷಣ ಸಂಸ್ಥೆಗಳು ತಕ್ಷಣ ಕಾರ್ಯಾರಂಭ ಮಾಡಲಿ ಹಾಗೂ ಅರ್ಜಿಗಳ ವಿಚಾರಣೆ ಮುಗಿಯುವವರೆಗೆ ಯಾರೊಬ್ಬರೂ ಯಾವುದೇ ಧಾರ್ಮಿಕ ಗುರುತುಗಳನ್ನು ಬಳಸುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿದೆ.
ಪ್ರಕರಣ ವರ್ಗಾವಣೆ ಬಳಿಕ ಇಂದು ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕಾಲೇಜು ಆರಂಭವಾದ ಮೇಲೆ ಹೈಕೋರ್ಟ್ ಮುಂದಿನ ಆದೇಶದ ತನಕ ಯಾರೂ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವಂತಿಲ್ಲ. ಒಂದು ವೇಳೆ ಮತ್ತೆ ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದರೆ ಅದು ಹೈಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಲಿದೆ.
ಹಿಜಾಬ್ ಬೇಕು ಎಂಬ ಅರ್ಜಿದಾರರ ಪರ ಸಂಜಯ್ ಹೆಗಡೆ, ದೇವದತ್ ಕಾಮತ್ ಅವರುಗಳು ವಾದಿಸಿದರು.