
ಮಂಗಳೂರು: ಹಿಜಾಬ್ ವಿವಾದ ಆರಂಭಿಸಿದ ಉಡುಪಿಯ 6 ಮಂದಿ ವಿದ್ಯಾರ್ಥಿನಿಯರಿಗೆ ಬ್ರೈನ್ ವಾಷ್ ಮಾಡಲಾಗಿದ. ಪಾಪ್ಯೂಲರ್ ಫ್ರಾಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಸಂಘಟನೆಯಾಗಿರುವ ಸಿ.ಎಫ್ .ಐ (ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ) ಈ ಪಿತೂರಿಯಲ್ಲಿ ನೇರವಾಗಿ ಭಾಗಿಯಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್ ಉಚ್ಚಿಲ ಬಾಂಬ್ ಸಿಡಿಸಿದ್ದಾರೆ.
ಇದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಈ ಸಂಚನ್ನು ಕಾರ್ಯರೂಪಕ್ಕೆ ತರಲು ಉಡುಪಿಯಲ್ಲಿ ಒಟ್ಟು 20 ಮಂದಿ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಟ್ರೇನಿಂಗ್ ನೀಡಿತ್ತು. ನನ್ನ ಬಳಿ ಆ ಟ್ರೈನಿಂಗ್ ಗೆ ಹಾಜರಾದವರೇ ಕೆಲವರು ವಿಷಯ ತಿಳಿಸಿದ್ದಾರೆ. ಆ ಟ್ರೈನಿಂಗ್ ನಲ್ಲಿ ಲ್ಯಾಪ್ಟಾಪ್ ಮೂಲಕ ಹಲವು ಧಾರ್ಮಿಕ ದ್ವೇಷದ ವಿಡಿಯೋಗಳನ್ನು ತೋರಿಸಿದ್ದಾರೆ. ಉತ್ತರ ಪ್ರದೇಶ, ಬಿಹಾರ ಹಾಗು ಮಂಗಳೂರಿನಲ್ಲಿ ನಡೆದ ಏನ್.ಆರ್.ಸಿ ಗಲಭೆ ಮತ್ತು ಗೋಲಿಬಾರಿನ ವಿಡಿಯೋಗಳನ್ನು ತೋರಿಸಿ ಇವರುಗಳ ಬ್ರೈನ್ ವಾಷ್ ಮಾಡಲಾಗಿದೆ. ಟ್ರೈನಿಂಗ್ ನಲ್ಲಿ ಭಾಗಿಯಾದ ಆ 20 ಮಂದಿಯಲ್ಲಿ ಈ ಹಿಜಾಬ್ ವಿವಾದ ಆರಂಭಿಸಿದ 6 ಮಂದಿ ವಿದ್ಯಾರ್ಥಿನಿಯರೂ ಇದ್ದರು ಎಂದು ರಹೀಮ್ ಉಚ್ಚಿಲ ಹೇಳಿದ್ದಾರೆ.
ರಾಜಕೀಯ ದುರುದ್ದೇಶದ ಸಂಚನ್ನು ಬಯಲು ಮಾಡಿದ್ದಕ್ಕೆ ನನಗೀಗ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ನಾನು ಅದಕ್ಕೆ ಜಗ್ಗುವುದಿಲ್ಲ. ಲೆಕ್ಕವಿಲ್ಲದಷ್ಟು ಇಂಟರ್ನೆಟ್ ಕಾಲ್ ಮೂಲಕ ಬೆದರಿಕೆ ಹಾಕುತ್ತಿದ್ದಾರೆ. ನಿನ್ನೆ ದಿನ ಒಬ್ಬ ಅವನ ವಯಕ್ತಿಕ ನಂಬರಿನಿಂದಲೇ ಕಾಲ್ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ರಹೀಮ್ ಉಚ್ಚಿಲ್ ಹೇಳಿದರು.
ಇದೊಂದು ಷಡ್ಯಂತ್ರ ಎಂದ ಪ್ರಮೋದ್ ಮುತಾಲಿಕ್, ಹಾಗು ಉಡುಪಿ ಶಾಸಕ ರಘುಪತಿ ಭಟ್:
ಹಿಂದೂ ನೇತಾರ ಪ್ರಮೋದ್ ಮುತಾಲಿಕ್ ಕೂಡ ಇದೊಂದು ಸಂಚು ಎಂದು ಹೇಳಿದ್ದು ಪಾಪ್ಯುಲರ್ ಫ್ರಾಂಟ್ ಆಫ್ ಇಂಡಿಯಾ, ಎಸ್ಡಿಪಿಐಗಳಂತಹ ಸಂಘಟನೆಗಳು ಇದರ ಹಿಂದೆ ಇದೆ ಎಂದು ಹೇಳಿದ್ದಾರೆ.
ವಿವಾದ ಸೃಷ್ಟಿಯಾದ ಉಡುಪಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರೂ ಆಗಿರುವ ಉಡುಪಿ ಶಾಸಕ ರಘುಪತಿ ಭಟ್ ಅವರು ಕೂಡ ಇದು ಯೋಜನಾಬದ್ಧವಾಗಿ ರೂಪಿಸಿದ ಷಡ್ಯಂತ್ರ ಎಂಬುದಾಗಿ ಹೇಳಿದ್ದಾರೆ. ಡಿಸೆಂಬರ್ ತನಕ ಹಿಜಾಬ್ ಇಲ್ಲದೆ ಬಂದಿದ್ದ ಆ 6 ವಿದ್ಯಾರ್ಥಿನಿಯರು ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ಹಿಜಾಬ್ ಧರಿಸಿ ಬರುತ್ತಾರೆ. ಹಾಗು ಮರುದಿನವೇ ಕೈಯಲ್ಲಿ ಹಿಜಾಬ್ ಪರ ಘೋಷಣೆಯ ಬೋರ್ಡ್ ಹಿಡಿದು ಗೇಟು ಪಕ್ಕ ನಿಲ್ಲುತ್ತಾರೆ ಅಂದರೆ ಇದು ಸಂಚಲ್ಲದೆ ಮತ್ತಿನ್ನೇನು ಎಂದು ಭಟ್ ಅವರು ಹೇಳಿದರು.