
ಬೆಂಗಳೂರು: ಹಿಂದೂ ಧರ್ಮೀಯರ ದೇಗುಲದ ಜಾತ್ರೆಗಳಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ಅನುವು ಮಾಡಿಕೊಡದಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಭಾರೀ ಚರ್ಚೆ ನಡೆದಿದ್ದು, ಕೈ ಕಮಲ ನಾಯಕರ ನಡುವೆ ಮಾತಿನ ಯುದ್ಧವೇ ನಡೆದಿದೆ. ಚರ್ಚೆ ನಂತರ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ ಧಾರ್ಮಿಕ ದತ್ತಿ ಕಾನೂನು ಪ್ರಕಾರ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹೇಳಿದರು.
ಚರ್ಚೆಗೆ ಉತ್ತರಿಸಿದ ಕಾನೂನು ಸಚಿವ ಮಾಧುಸ್ವಾಮಿ, 2002 ಹಿಂದೂ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಧಾರ್ಮಿಕ ಸಂಸ್ಥೆಗಳ ಸಮೀಪದ ಕಟ್ಟಡ, ಜಮೀನು, ನಿವೇಶನಗಳನ್ನು ಹಿಂದೂಗಳಲ್ಲದವರಿಗೆ ಗುತ್ತಿಗೆ ನೀಡುವಂತಿಲ್ಲ ಎಂದು ಹೇಳಿದೆ. ಇದು ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಮಾಡಿದ್ದು. ಬೇರೆ ಧರ್ಮದವರಿಗೆ ಅವಕಾಶ ಇಲ್ಲ ಎಂದು ಹೇಳಿದೆ. ನಾವೇನೂ ಮಾಡಲು ಬರಲ್ಲ. ಇದನ್ನು ದೇವಸ್ಥಾನದ ಹೊರಗಡೆ ಸಾಧ್ಯವಾದರೆ ಸರಿಪಡಿಸಬಹುದು ಅಷ್ಟೆ ಎಂದು ಹೇಳಿದರು.
ಇದಕ್ಕೂ ಮುನ್ನ ರಾಜ್ಯದ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರಕ್ಕೆ ಅವಕಾಶ ನೀಡದ ವಿಚಾರ ವಿವಿಪಕ್ಷ ಆಡಳಿತ ಪಕ್ಷ ನಡುವೆ ವಾಗ್ವಾದ ನಡೆಯಿತು. ವಿಪಕ್ಷ ಉಪನಾಯಕ ಕಾಂಗ್ರೆಸ್‌ನ ಯು.ಟಿ. ಖಾದರ್ ವಿಷಯ ಪ್ರಸ್ತಾಪಿಸಿ, ಕೆಲ ಕ್ರೂರ ಮನಸ್ಸಿನವರು, ಹೇಡಿಗಳು, ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳಲ್ಲಿ ಮುಸ್ಲಿಂ ಧರ್ಮದವರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ ಹೇರುತ್ತಿರುವವರು ಹೇಡಿಗಳು ಎಂದು ಹೇಳಿದರು.
ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ರಘುಪತಿಭಟ್, ಹರೀಶ್ ಪೂಂಜಾ, ಸಂಜೀವ್ ಮತಂದೂರು, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸೇರಿ ಹಲವು ಸದಸ್ಯರು ಖಾದರ್ ಜತೆ ವಾಗ್ವಾದಕ್ಕೆ ಇಳಿದರು. ಹೇಡಿಗಳು ಯಾರು ಎಂದು ಖಾದರ್ ಹೇಳಬೇಕು ಎಂದು ರಘುಪತಿ ಭಟ್ ಮತ್ತು ಹರೀಶ್ ಪೂಂಜಾ ಪಟ್ಟು ಹಿಡಿದರು. ಆಗ ಖಾದರ್ ಅವರು ನಾನು ಇಲ್ಲಿ ಯಾವುದೇ ಧರ್ಮದ ಹೆಸರು ಪ್ರಸ್ತಾಪ ಮಾಡಿಲ್ಲ. ಎಂದು ಹೇಳಿ ಸಮಜಾಯಿಷಿ ನೀಡುವ ಪ್ರಯತ್ನ ಪಟ್ಟರು. ಇದರಿಂದ ಮತ್ತೆ ಗದ್ದಲ ಸೃಷ್ಟಿಯಾಯಿತು.
ಹಿಜಾಬ್ ವಿಚಾರವಾಗಿ ನ್ಯಾಯಾಲಯದ ತೀರ್ಪನ್ನು ವಿರೋಧಿಸಿ ಭಾರತೀಯ ನ್ಯಾಯಾಂಗವನ್ನೇ ಧಿಕ್ಕರಿಸಿ ಬಂದ್ ಆಚರಿಸಿ ಪ್ರತ್ಯೇಕತಾವಾದಿ ವರ್ತನೆ ತೋರಿದ ಮುಸ್ಲಿಂ ಸಮುದಾಯದ ಮೇಲೆ ಕೋಪಗೊಂಡಿರುವ ಭಾರತೀಯ ಹಿಂದೂಗಳು ಈಗ ಮುಸ್ಲಿಮರನ್ನು ವ್ಯಾಪಾರದಿಂದ ದೂರ ಇಡುವ ಮೂಲಕ ಪಾಠ ಕಲಿಸುತ್ತಿದ್ದಾರೆ.












































