Karnataka

ಮುಂದಿನ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ: ಗೃಹ ಸಚಿವ ಅರಗ ಜ್ಞಾನೇಂದ್ರ

ಬೆಂಗಳೂರು: ಬರುವ ತಿಂಗಳ 13ರಿಂದ ಆರಂಭವಾಗುವ ವಿಧಾನ ಮಂಡಲ ಅಧಿವೇಶನದಲ್ಲಿ ಸರ್ಕಾರ ಮತಾಂತರ ನಿಷೇಧ ಕಾಯಿದೆ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಈ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ.

ಗುಜರಾತ್, ಉತ್ತರ ಪ್ರದೇಶ, ಝಾರ್ಖಂಡ್, ಮಧ್ಯಪ್ರದೇಶಗಳಲ್ಲಿ ಈಗಾಗಲೇ ಈ ಕಾನೂನು ಜಾರಿಯಾಗಿದ್ದು ಈ ಬಗ್ಗೆ ನಮ್ಮ ಸರ್ಕಾರ ಅಧ್ಯಯನ ನಡೆಸುತ್ತಿದೆ. ಕರಡು ರಚನೆ ನಡೆಯುತ್ತಿದ್ದು ಮುಂದಿನ ಅಧಿವೇಶನದಲ್ಲಿ ಮಂಡಿಸಲು ಸರಕಾರ ಉತ್ಸುಕವಾಗಿದೆ ಎಂದು ಗೃಹ ಸಚಿವರು ಹೇಳಿದರು.

ಈಗಾಗಲೇ ಹಲವು ಹಿಂದೂ ಸ್ವಾಮೀಜಿಗಳು ಮುಖ್ಯಮಂತ್ರಿಗಳನ್ನು ಸಚಿವರನ್ನು ಭೇಟಿ ಮಾಡಿ ಮತಾಂತರ ನಿಷೇಧ ಕಾನೂನಿನ ಅಗತ್ಯತೆಯನ್ನು ಮನದಟ್ಟು ಮಾಡಿದ್ದರು. ಮತ್ತೊಂದೆಡೆ ಕ್ರಿಶ್ಚಿಯನ್ ಮತದ ಆರ್ಚ್ ಬಿಷಪ್ ಪೀಟರ್ ಮಚಾದೋ ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಆ ಪತ್ರದ ಬಗ್ಗೆ ಮಾತನಾಡಿದ ಆರಗ ಜ್ಞಾನೇಂದ್ರ ಯಾರೇ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಧರ್ಮಕ್ಕೂ ಕಾನೂನಿಗೂ ಸಂಬಂಧವಿಲ್ಲ. ಬಲವಂತದ ಮತಾಂತರಕ್ಕೆ ಮಾತ್ರ ಕಾನೂನಿನಲ್ಲಿ ತಡೆ ನೀಡಲಾಗುವುದು ಎಂದು ಹೇಳಿದರು.

Exit mobile version