
ನವದೆಹಲಿ: ಆರ್ಥಿಕ ಅಪರಾಧಿಗಳು ದೇಶಕ್ಕೆ ಮರಳದೇ ಬೇರೆ ಆಯ್ಕೆಗಳಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ. ಅನಂತಹ ಅಪರಾಧಿಗಳನ್ನು ದೇಶಕ್ಕೆ ಕರೆತರಲು ರಾಜತಾಂತ್ರಿಕ ಮಾರ್ಗ ಸೇರಿದಂತೆ ಎಲ್ಲಾ ರೀತಿಯ ದಾರಿಗಳನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ.
ಆರ್ಥಿಕ ಸಮ್ಮೇಳನವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಉದ್ಯೋಗ ಹಾಗು ಸಂಪತ್ತು ಸೃಷ್ಟಿಸುವ ಸೃಷ್ಟಿದಾರರಿಗೆ ಬ್ಯಾಂಕ್’ಗಳು ಪೂರ್ವಭಾವಿಯಾಗಿ ಸಲ ನೀಡುವ ಮೂಲಕ ಬೆಂಬಲಿಸಬೇಕು ಎಂದು ಹೇಳಿದರು. ಸರಿಯಾದ ಮಾರ್ಗದಲ್ಲಿ ಸಲ ನೀಡುವ ಬ್ಯಾಂಕುಗಳ ಪರವಾಗಿ ನಾವು ನಿಲ್ಲುತ್ತೇವೆ ಎಂದು ಈ ಸಂದರ್ಭ ಮೋದಿ ಹೇಳಿದರು.
ಆರ್ಥಿಕ ವಂಚಕರನ್ನು ಕರೆತರಲು ನಾವು ಕಾನೂನು ಮತ್ತು ನೀತಿಗಳ ಮೇಲೆ ಅವಲಂಬಿತರಾಗಿದ್ದು, ರಾಜತಾಂತ್ರಿಕ ಮಾರ್ಗವನ್ನು ಕೂಡಾ ಬಳಸಿಕೊಂಡಿದ್ದೇವೆ. ಮತ್ತು ಈ ಪ್ರಯತ್ನ ಮುಂದುವರೆಯಲಿದೆ ಎಂದು ಪುನರುಚ್ಚರಿಸಿದ ಮೋದಿ ಯಾವುದೇ ಆರ್ಥಿಕ ಅಪರಾಧಿಗಳ ಹೆಸರನ್ನು ಪ್ರಸ್ತಾಪಿಸಲಿಲ್ಲ. ನೀರವ್ ಮೋದಿ, ವಿಜಯ್ ಮಲ್ಯರಂತಹ ಉದ್ಯಮಿಗಳು ಭಾರತೀಯ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ದೇಶ ತೊರೆದಿದ್ದನ್ನು ನಾವು ಇಲ್ಲಿ ಗಮನಿಸಬಹುದು.
ನಮ್ಮ ದೇಶದಲ್ಲಿ ಕೃಷಿ ಮೇಲಿನ ಹೂಡಿಕೆ ಕಡಿಮೆಯಾಗಿದ್ದು, ಕೃಷಿ ಮೇಲಿನ ಹೂಡಿಕೆಗಳಿಗೆ ಬ್ಯಾಂಕುಗಳು ಬೆಂಬಲಿಸಿದರೆ ಕೃಷಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಕಾಣಬಹುದು. ಹಾಗೆಯೆ ಮಹಿಳಾ ಸ್ವ ಸಹಾಯ ಗುಂಪುಗಳು ದೊಡ್ಡ ಶಕ್ತಿಯನ್ನು ಹೊಂದಿದ್ದು ನೀವುಗಳು ಅವರಿಗಾಗಿ ಯಾವುದೇ ಯೋಜನೆಯನ್ನು ಹೊಂದಿದ್ದೀರೇ ಎಂದು ಮೋದಿ ಪ್ರಶ್ನಿಸಿದರು.