
ತಿರುವನಂತಪುರ: ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಏರಿಳಿಕೆಯಾಗುತ್ತಿದ್ದು ಕೇರಳ ಒಂದರಲ್ಲಿ ಮಾತ್ರ ಏರಿಕೆಯತ್ತ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 37,593 ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ ಕೇರಳ ರಾಜ್ಯದ ಪಾಲು ಬರೋಬ್ಬರಿ 31,445 ಕೇಸುಗಳು.
ಕೇರಳದಲ್ಲಿ ಪಾಸಿಟಿವಿಟಿ ದರ ಕೂಡ ತೀವ್ರ ಮಟ್ಟದಲ್ಲಿ ಏರಿಕೆಯಾಗಿದ್ದು ಇಂದಿನ ಪ್ಯಾಸಿಟಿವಿಟಿ ದರ ಶೇಕಡಾ 19 ಆಗಿದೆ. ಇಂದಿನ ಪ್ರಕರಣಗಳೊಂದಿಗೆ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 38,83,429 ತಲುಪಿದೆ. ಇಂದು ಕೇರಳದಲ್ಲಿ 215 ಮಂದಿ ಕೊರೋನಾಗೆ ಬಲಿಯಾಗಿದ್ದು ಒಟ್ಟು ಸಾವಿಗೀಡಾದವರ ಸಂಖ್ಯೆ 19,972 ಮುಟ್ಟಿದೆ.
ಜೂಲೈ ಕೊನೆಯ ವಾರದಲ್ಲಿ ಬಕ್ರೀದ್ ಹಬ್ಬಕ್ಕಾಗಿ ಕೇರಳ ಸರಕಾರ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದ ನಂತರ ದಿನಂಪ್ರತಿ 20,000 ಕೋವಿಡ್ ಪ್ರಕರಣಗಳು ಕೇರಳದಲ್ಲಿ ದಾಖಲಾಗುತ್ತಿವೆ. ಮುಂದಿನ ದಿನಗಳಲ್ಲಿ ಕೇರಳದಲ್ಲಿ ಪಾಸಿಟಿವಿಟಿ ದರ 20 ಶೇಕಡಾವನ್ನು ದಾಟುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.
ಮತ್ತೊಂದೆಡೆ ಕೇರಳದ ವಿದ್ಯಾರ್ಥಿಗಳಿಂದಾಗಿ ದಕ್ಷಿಣ ಕನ್ನಡದ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ಕಳೆದ 2 ವಾರಗಳಲ್ಲಿ ಕೇರಳದಿಂದ ದಕ್ಷಿಣಕನ್ನಡಕ್ಕೆ ಬಂದು ಇಲ್ಲಿನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 620 ಕೇರಳದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಆಶ್ಚರ್ಯ ಎಂದರೆ ಇವರೆಲ್ಲರೂ ಕೋವಿಡ್ ನೆಗೆಟಿವ್ ವರದಿ ತೋರಿಸಿ ರಾಜ್ಯವನ್ನು ಪ್ರವೇಶಿಸಿದ್ದರು. ಒಟ್ಟು 900 ಮಂದಿ ಕೇರಳೀಯ ವಿದ್ಯಾರ್ಥಿಗಳು ಜಿಲ್ಲೆಗೆ ಬಂದಿದ್ದು ಅವರಲ್ಲಿ 620 ಮಂದಿಗೆ ಸೋಂಕು ದೃಢಪಟ್ಟಿರುವುದು ಕೇರಳದ ನೆಗೆಟಿವ್ ರಿಪೋರ್ಟ್ ಬಗ್ಗೆ ಅನುಮಾನ ಮೂಡುವಂತಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದಿಂದ ಬರುವ ವಿದ್ಯಾರ್ಥಿಗಳನ್ನು ಆಯಾ ಕಾಲೇಜಿನ ಹಾಸ್ಟೆಲುಗಳಲ್ಲಿ ಕ್ವಾರಂಟೈನ್’ಗೆ ಒಳಪಡಿಸಲು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿತ್ತು. ಆದರೂ ಕ್ವಾರಂಟೈನ್ ಒಳಪಡಿಸುವುದರಲ್ಲಿ ಹೆಚ್ಚಿನ ಕಡೆ ಲೋಪವಾಗಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಜಿಲ್ಲಾಡಳಿತ ಹಲವು ಕಾಲೇಜುಗಳಿಗೆ ನೋಟೀಸ್ ಜಾರಿಗೊಳಿಸಿದೆ. ಕಾಲೇಜು ಫೀಸಿನ ಆಸೆಗಾಗಿ ಜಿಲ್ಲೆಯ ಜನರನ್ನು ಅಪಾಯಕ್ಕೆ ತಳ್ಳುವ ಇಲ್ಲಿನ ಶಿಕ್ಷಣ ಸಂಸ್ಥೆಗಳ ಬಗ್ಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ.












































