
ಮಂಗಳೂರು: ಮಂಡ್ಯದಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿರುವ, ಮಂಗಳೂರಿನ ಬಿಜೆಪಿ ಮುಖಂಡರೂ ಆಗಿರುವ ಜಗನ್ನಾಥ್ ಶೆಟ್ಟಿ ಎಂಬವರಿಗೆ ಹನಿ ಟ್ರ್ಯಾಪ್ ಮಾಡಿ 50 ಲಕ್ಷ ಲೂಟಿ ಮಾಡಿದ ಆರೋಪದಲ್ಲಿ ಆರೋಪಿ ಸಲ್ಮಾ ಭಾನು ಬಂಧನವಾಗಿದ್ದು ಉಳಿದವರಿಗೆ ಶೋಧ ಮುಂದುವರೆದಿದೆ. ಮಂಡ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೊದಲ ಆರೋಪಿ ಸಲ್ಮಾ ಭಾನುವನ್ನು ಬಂಧಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಜಗನ್ನಾಥ್ ಶೆಟ್ಟಿ ಅವರು ತನ್ನ ಊರಾದ ಮಂಗಳೂರಿಗೆ ತೆರಳಲು ಮಂಡ್ಯ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದಾಗ ಮೈಸೂರು ತನಕ ಡ್ರಾಪ್ ಕೊಡುವುದಾಗಿ ನಾಲ್ಕು ಮಂದಿಯ ತಂಡ ಕಾರಿನಲ್ಲಿ ಕುಳ್ಳಿರಿಸಿತ್ತು. ನಂತರ ಅಲ್ಲಿಂದ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅಲ್ಲಿ ರೂಮಿನಲ್ಲಿ ಯುವತಿ ಜತೆ ವಿಡಿಯೋ ಚಿತ್ರೀಕರಣ ನಡೆಸಿ ನಂತರ 4 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಆ ಸಮಯಕ್ಕೆ 50 ಲಕ್ಷ ನೀಡಿದ್ದ ಜಗನ್ನಾಥ್ ಶೆಟ್ಟಿ ಊರಿಗೆ ತೆರಳಿದ್ದರು. ಇಷ್ಟಕ್ಕೆ ಸುಮ್ಮನಾಗದ ಆ ಗ್ಯಾಂಗ್ ಮತ್ತೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲು ಆರಂಭಿಸಿತ್ತು.
ಬೇಡಿಕೆಯಿಂದ ಬೇಸತ್ತ ಜಗನ್ನಾಥ್ ಶೆಟ್ಟಿ ಅವರು ಈ ಬಗ್ಗೆ ಪೊಲೀಸ್ ಕೇಸು ನೀಡಿದ್ದರು. ಆ ಸಂಬಂಧ ಈಗ ಸಾಮಾಜಿಕ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದ ಮಂಡ್ಯದ ಸಲ್ಮಾ ಭಾನು ಎಂಬವರನ್ನು ಮ್ಯಾಂಡಿ ಅಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಗನ್ನಾಥ್ ಶೆಟ್ಟಿ ಅವರಂತೆಯೇ ಇನ್ನೂ ಹಲವಾರು ಮಂದಿ ಈ ಜಾಲದಲ್ಲಿ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆ ಇದ್ದು ಪೊಲೀಸರು ಸಲ್ಮಾ ಭಾನುವಿನ ವಿಚಾರಣೆ ತೀವ್ರಗೊಳಿಸಿದ್ದಾರೆ.