
ಹೊಸಪೇಟೆ: ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆಯಾಗಿದ್ದ ವಿಜಯನಗರ ನೂತನ ಜಿಲ್ಲೆ ನಾಳೆ (ಒಕ್ಟೋಬರ್ 2) ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಹೊಸಪೇಟೆ ನಗರ ಮದುವನಗಿತ್ತಿಯಂತೆ ಅಲಂಕೃತಗೊಂಡಿದೆ.
ಹೊಸ ಜಿಲ್ಲೆ ಉದ್ಘಾಟನೆ ಹಿನ್ನಲೆಯಲ್ಲಿ ಹೊಸಪೇಟೆ ನಗರ ಲೈಟಿಂಗ್ ಅಲಂಕಾರದೊಂದಿಗೆ ಕಂಗೊಳಿಸುತ್ತಿದೆ. ಜಿಲ್ಲೆಯಾದ್ಯಂತ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ. ಪ್ರವಾಸೋದ್ಯಮ ಸಚಿವ, ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರ ಸತತ ಪ್ರಯತ್ನಗಳ ಫಲವಾಗಿ ವಿಜಯನಗರ ಜಿಲ್ಲೆ ರಚನೆಯಾಗಿದೆ. ಮುಖ್ಯಮಂತ್ರಿಗಳು ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಲಿದ್ದು ಇದು ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡಿದೆ ಎಂದು ಸ್ವತಃ ಆನಂದ್ ಸಿಂಗ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸುಮಾರು 464 ಕೋಟಿ ವೆಚ್ಚದ 55 ವಿವಿಧ ಕಾಮಗಾರಿಗಳಿಗೆ ಈ ಸಂದರ್ಭ ಚಾಲನೆ ನೀಡಲಿದ್ದಾರೆ. ಇವಿಷ್ಟೇ ಅಲ್ಲದೆ ಹೊಸ ಜಿಲ್ಲೆಗೆ ಜಿಲ್ಲಾಡಳಿತ ಕಚೇರಿ, ಮೆಡಿಸಿಟಿ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಇನ್ನಷ್ಟು ಅನುದಾನ ಒದಗಿಸಲು ಸಚಿವ ಆನಂದ್ ಸಿಂಗ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಮಧ್ಯೆ ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಯಾಗಿ ಅನಿರುದ್ಧ್ ಶ್ರವಣ್ ಹಾಗೂ ಎಸ್ಪಿಯಾಗಿ ಡಾ. ಅರುಣ್ ಕೆ ನೇಮಕಗೊಂಡಿದ್ದಾರೆ.












































