
ಬೆಂಗಳೂರು: ಬಾಳಿನ ಮಧ್ಯದಲ್ಲಿಯೇ ಹಠಾತ್ ಇಹಲೋಕ ತ್ಯಜಿಸಿದ ಕನ್ನಡಿಗರ ಕಣ್ಮಣಿ ಪುನೀತ್ ರಾಜ್ ಕುಮಾರ್ ಇಂದು ಬೆಳಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಪಂಚ ಭೂತಗಳಲ್ಲಿ ಲೀನರಾದರು. ಇಂದು ಬೆಳಗ್ಗೆ ಸಕಲ ಸರ್ಕಾರೀ ಗೌರವಗಳೊಂದಿಗೆ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಸಲಾಯಿತು.
ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತರಲಾಯಿತು. ಸ್ಟುಡಿಯೋ ಒಳಗಡೆ ಕೇವಲ ಕುಟುಂಬ ಸದಸ್ಯರಿಗೆ ಹಾಗು ಚಿತ್ರರಂಗದ ಪ್ರಮುಖರರಿಗೆ ಅವಕಾಶ ಕಲ್ಪಿಸಲಾಗಿತ್ತು. ಪುನೀತ್ ಭೂ ತಾಯ ಮಡಿಲು ಸೇರುವ ಹೊತ್ತಿನಲ್ಲಿ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುನೀತ್ ಹಿರಿ ಮಗಳು ಧೃತಿ, ಕಿರಿ ಮಗಳು ವಂದಿತ, ಪತ್ನಿ ಅಶ್ವಿನಿ ಕಣ್ಣೀರು ನೋಡುಗರ ಹೃದಯ ಕಲಕುವಂತಿತ್ತು. ಕುಟುಂಬಿಕರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಶ್ರೀಮುರುಳಿ, ವಿಜಯರಾಘವೇಂದ್ರ, ರಾಮ್ ಕುಮಾರ್ ಮತ್ತಿತರರು ಅಂತಿಮ ನಮನ ಸಲ್ಲಿಸಿದರು.
ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಚಿತ್ರರಂಗದ ಪ್ರಮುಖರಾದ ಸುದೀಪ್, ರಾಕ್ ಲೈನ್ ವೆಂಕಟೇಶ್, ರಮೇಶ್ ಅರವಿಂದ್, ಯಶ್, ರವಿಚಂದ್ರನ್, ಉಪೇಂದ್ರ, ಗಣೇಶ್, ತಾರಾ, ಶ್ರುತಿ ಮುಂತಾದವರು ಅಂತಿಮ ವಿಧಿ ವಿಧಾನಕ್ಕೆ ಸಾಕ್ಷಿಯಾದರು.












































