Karnataka

ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ದೊಡ್ಡ ದೊಡ್ಡ ಮೀನುಗಳು: ಎಡಿಜಿಪಿ ಹುದ್ದೆ ಅಧಿಕಾರಿ ಅಮೃತ್ ಪೌಲ್ ಬಂಧನ

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿ ಬಂಧನಕ್ಕೆ ಒಳಗಾಗುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಿದ್ದು ದೊಡ್ಡ ದೊಡ್ಡ ಮೀನುಗಳೇ ಹಗರಣದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಇದೀಗ ಎಡಿಜಿಪಿ ಹುದ್ದೆಯ ಅಧಿಕಾರಿ ಅಮೃತ್ ಪೌಲ್ ಅವರನ್ನು ಸಿಐಡಿ ಬಂಧಿಸಿದ್ದು ಈ ಬಂಧನ ಭಾರೀ ಸಂಚಲವನ್ನು ಉಂಟು ಮಾಡಿದೆ.

ಐಪಿಎಸ್ ಕರ್ನಾಟಕ ಕೇಡರ್‌ನ ಇತಿಹಾಸದಲ್ಲಿ ಎಡಿಜಿಪಿ ಶ್ರೇಣಿಯ ಅಧಿಕಾರಿಯೊಬ್ಬರನ್ನು ಬಂಧಿಸಿರುವುದು ಇದೇ ಮೊದಲು ಎನ್ನಲಾಗಿದೆ. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಇಂದು ಕಾರ್ಲ್‌ಟನ್ ಹೌಸ್‌ನಲ್ಲಿರುವ ಸಿಐಡಿ ಕಚೇರಿಗೆ ಐಪಿಎಸ್ ಅಧಿಕಾರಿ ಪೌಲ್ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಹಗರಣದಲ್ಲಿ ಇದುವರೆಗೆ ಸಿಐಡಿ 79 ಜನರನ್ನು ಬಂಧಿಸಿದೆ.

ಅಮೃತ್ ಪೌಲ್ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದಾಗ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪರೀಕ್ಷೆಗಳು ನಡೆದಿದ್ದವು. ಹಗರಣ ಹೊರಬಿದ್ದ ಕೂಡಲೇ ಸರ್ಕಾರವು ಪೌಲ್‌ನನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಿತ್ತು. ಅಮೃತ್ ಪೌಲ್ 25 ಅಭ್ಯರ್ಥಿಗಳ ಜೊತೆ 30 ಲಕ್ಷ ರೂಪಾಯಿ ಡೀಲ್ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿದ್ದು ಈ ಕುರಿತು ಹೆಚ್ಚಿನ ತನಿಖೆಗಾಗಿ ಸಿಐಡಿ ಪೌಲ್ ಅವರನ್ನು ಬಂಧಿಸಿದೆ.

Exit mobile version