
ಬೆಂಗಳೂರು: ಕುಂಕುಮ, ಬಳೆ, ಸಿಂಧೂರ ನಮ್ಮ ದೇಶದ ಸಂಸ್ಕೃತಿಯ ಪ್ರತೀಕವಾಗಿದ್ದು ಅದು ಧಾರ್ಮಿಕ ಭಾಗವಲ್ಲ. ಹಾಗಾಗಿ ಬಳೆ ಕುಂಕುಮ ಬಗ್ಗೆ ಪ್ರಶ್ನೆ ಬೇಡ. ಅದಕ್ಕೂ ಹಿಜಾಬ್ ಗೂ ಸಂಬಂಧವಿಲ್ಲ. ಕುಂಕುಮ, ಬಳೆ ಸಿಂಧೂರವನ್ನು ಧರಿಸಿ ಬಂದವರನ್ನು ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು ತಡೆದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಇಂದು ಮಾಧ್ಯಮ ಮಿತ್ರರೊಡನೆ ಮಾತನಾಡಿದ ಸಚಿವರು, “ಬಳೆ,ಸಿಂಧೂರ, ಕುಂಕುಮಗಳು ಅಲಂಕಾರಿಕ ವಸ್ತುಗಳಾಗಿದ್ದು ಅವು ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ಹಿಜಾಬ್ ಧಾರ್ಮಿಕ ಗುರುತನ್ನು ಸೂಚಿಸುತ್ತದೆ. ಹಿಜಾಬ್ ಗೆ ಪ್ರತಿಯಾಗಿ ಬಳೆ, ಸಿಂಧೂರ, ಕುಂಕುಮವನ್ನು ಹೋಲಿಕೆ ಮಾಡುವುದು ಬೇಡ. ಅದನ್ನು ಧರಿಸಿ ಬಂದವರನ್ನು ತಡೆದರೆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಆದೇಶ ನೀಡಿದ್ದೇನೆ ಎಂದು ತಿಳಿಸಿದರು.
ಶುಕ್ರವಾರ ವಿಜಯಪುರದ ಇಂಡಿ ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕುಂಕುಮ ಇಟ್ಟುಕೊಂಡು ಬಂದ ವಿದ್ಯಾರ್ಥಿಗೆ ತರಗತಿಯೊಳಗೆ ಶಿಕ್ಷಕರು ಪ್ರವೇಶ ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಸಚಿವರ ಈ ಆದೇಶ ಮಹತ್ವ ಪಡೆದಿದೆ.