
ನವದೆಹಲಿ : ಮಹತ್ವದ ಬೆಳವಣಿಗೆಯಲ್ಲಿ ಸುಪ್ರೀಂ ಕೋರ್ಟ್ ಇಂದು, ಕರ್ನಾಟಕದ ಮಾಜಿ ಸಚಿವ ಗಾಳಿ ಜನಾರ್ಧನ ರೆಡ್ಡಿಗೆ ಬಳ್ಳಾರಿ ಸೇರಿದಂತೆ ಕರ್ನಾಟಕ ಹಾಗು ಆಂಧ್ರಪ್ರದೇಶದ ಜಿಲ್ಲೆಗಳಿಗೆ ಭೇಟಿ ನೀಡಲು ಷರತ್ತುಬದ್ಧ ಅನುಮತಿ ನೀಡಿದೆ.
ಹೊಸ ಆದೇಶದ ಅನ್ವಯ ಜನಾರ್ಧನ ರೆಡ್ಡಿ ಬಳ್ಳಾರಿ ಸೇರಿದಂತೆ ಈ ಹಿಂದೆ ನಿರ್ಬಂಧಿಸಲ್ಪಟ್ಟ ಜಿಲ್ಲೆಗಳಲ್ಲಿ ಎಂಟು ವಾರಗಳ ಕಾಲ ಉಳಿಯಬಹುದಾಗಿದೆ. ಈ ಹಿಂದೆ ಬಳ್ಳಾರಿ ಭೇಟಿಗೆ ಅನುಮತಿಸಲ್ಪಟ್ಟ ಸಂದರ್ಭದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಹಾಗು ಜಾಮೀನು ಷರತ್ತುಗಳನ್ನು ಉಲ್ಲಂಘಿಸದೆ ಸನ್ನಡತೆ ತೋರಿದ ಕಾರಣ ನೀಡಿ ಮತ್ತೆ ಜಿಲ್ಲೆ ಭೇಟಿಗೆ ಅವಕಾಶ ನೀಡುವಂತೆ ರೆಡ್ಡಿ ಪರ ವಕೀಲರಾದ ಮುಕುಲ್ ರೋಹಟಗಿ ಸುಪ್ರೀಂ ಕೋರ್ಟ್ನಲ್ಲಿ ಮನವಿ ಮಾಡಿದ್ದರು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2015ರ ಜ. 20ರಂದು ರೆಡ್ಡಿಗೆ ಜಾಮೀನು ನೀಡಿ ಕರ್ನಾಟಕದ ಬಳ್ಳಾರಿ, ಆಂಧ್ರದ ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಿತ್ತು. ಈಗ ಆ ಜಿಲ್ಲೆಗಳಿಗೆ ತೆರಳಲು ಮತ್ತು ಅಲ್ಲಿ ವಾಸ್ತವ್ಯ ಹೊಂದಲು ರೆಡ್ಡಿಗೆ ಅನುಮತಿ ನೀಡಲಾಗಿದೆ.
ರೆಡ್ಡಿ ಪರ ವಕೀಲ ಮುಕುಲ್ ರೋಹಟಗಿ, ‘ಈ ಪ್ರಕರಣದಲ್ಲಿ ಈಗಾಗಲೇ 1000 ದಾಖಲೆಗಳು ಹಾಗು 300ರಷ್ಟು ಸಾಕ್ಷಿಗಳು ಇವೆ. ಈ ನ್ಯಾಯಾಲಯ ವಿಚಾರಣೆ ಮುಂದಿನ 10 ವರ್ಷಗಳವರೆಗೂ ಸಾಗಬಹುದು. ಅಲ್ಲಿಯವರೆಗೆ ಊರಿಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸುವುದು ಅತ್ಯಂತ ಕಠಿಣ ಕ್ರಮವಾಗಿದೆ’ ಎಂದು ವಾದಿಸಿದರು.












































