
ಚಿತ್ರ : ಅವತಾರ ಪುರುಷ – ಭಾಗ 1 (ಕನ್ನಡ)
ತಾರಾಗಣ: ಶರಣ್, ಆಶಿಕಾ ರಂಗನಾಥ್, ಸಾಯಿಕುಮಾರ್, ಶ್ರೀನಗರ ಕಿಟ್ಟಿ, ಬಿ. ಸುರೇಶ, ಭವ್ಯಾ, ಸುಧಾರಾಣಿ, ಸಾಧು ಕೋಕಿಲ, ಅಶುತೋಷ್ ರಾಣಾ ಮುಂತಾದವರು.
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯ
ಚಿತ್ರದ ಜಾನರ್: ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್
ಚಿತ್ರದ ಅವಧಿ: 2 ಗಂಟೆ 11 ನಿಮಿಷಗಳು
ಚಿತ್ರ ವಿಮರ್ಶೆ: ಅಶ್ವಿನ್ ಅಮೀನ್
ಶರಣ್ ನಟನೆಯ ಚಿತ್ರ ಟಾಕೀಸಿಗೆ ಬಂದು 2 ವರ್ಷ ಮೇಲಾಗಿತ್ತು. ವಿಭಿನ್ನ ಮ್ಯಾನರಿಸಂ ಮೂಲಕ ತನ್ನದೇ ಆದ ಫ್ಯಾನ್ ಬೇಸ್ ಸೃಷ್ಟಿಸಿಕೊಂಡಿರುವ ಶರಣ್ ಕೊನೆಗೂ ಅವತಾರ ಪುರುಷ ಮೂಲಕ ದರ್ಶನ ನೀಡಿದ್ದಾರೆ. ಹೇಗಿದೆ ಸಿನೆಮಾ, ಕಲಾವಿದರ ಪರ್ಫಾರ್ಮೆನ್ಸ್ ಹೇಗಿದೆ, ಚಿತ್ರ ಓಡುತ್ತಾ, ಕುಂಟುತ್ತಾ ಎಲ್ಲವನ್ನೂ ಹೇಳ್ತೀನಿ ಬನ್ನಿ.
ನಾಯಕ ನಟ ಶರಣ್ (ಅನಿಲ) ಇಲ್ಲಿ ದಿನಕ್ಕೆ 300-500 ರೂ ಸಂಭಾವನೆಗೆ ದುಡಿಯುವ ಒಬ್ಬ ಜೂನಿಯರ್ ಆರ್ಟಿಸ್ಟ್. ಸಿಕ್ಕ ಸಿಕ್ಕ ಕಡೆ ಆಡಿಷನ್ ಕೊಡುತ್ತ ಸಣ್ಣ ಪುಟ್ಟ ಪಾತ್ರ ಮಾಡುತ್ತಾ ಸುತ್ತುತ್ತಿರುವ ಅನಿಲನಿಗೆ ಒಂದು ಮನೆಗೆ ಚಿಕ್ಕಂದಿನಲ್ಲಿ ಕಳೆದು ಹೋದ ಮನೆ ಮಗನಾಗಿ ಹೋಗುವ (ಪಾತ್ರ ಮಾಡುವ) ಅವಕಾಶ ಬರುತ್ತೆ. ರಾಮ ಜೋಯಿಸ್ (ಸಾಯಿಕುಮಾರ್), ಸುಶೀಲ(ಭವ್ಯ) ಅವರ ಕಳೆದು ಹೋದ ಮಗನಾಗಿ ಅನಿಲ ಮನೆಗೆ ಪ್ರವೇಶಿಸುತ್ತಾನೆ. ಅದಕ್ಕೆ ಬೇಕಾದ ಎಲ್ಲ ಏರ್ಪಾಟನ್ನು ನಾಯಕಿ ಸಿರಿ (ಆಶಿಕಾ ರಂಗನಾಥ್) ಮಾಡಿರುತ್ತಾಳೆ. ಅದಾಗಲೇ ಆ ಮನೆಯ ಮೇಲೆ ವಾಮಾಚಾರಿಗಳ ಕಣ್ಣು ನೆಟ್ಟಿರುತ್ತದೆ. ವಾಮಾಚಾರಿಗಳ ಗುಂಪು ತಮ್ಮ ಸಾಧನೆಗಾಗಿ ತ್ರಿಶಂಕು ಲೋಕವನ್ನು ಪ್ರವೇಶಿಸಲು ತ್ರಿಶಂಕು ಮಣಿಯ ಹುಡುಕಾಟದಲ್ಲಿರುತ್ತಾರೆ. ಆ ಮಣಿಯನ್ನು ದೇವಾರಾಧಕನಾದ ರಾಮ ಜೋಯಿಸರ ತಂದೆ ಬ್ರಹ್ಮ ಜೋಯಿಸರು ಮಾಂತ್ರಿಕರಿಗೆ ಸಿಗದಂತೆ ಭದ್ರಪಡಿಸಿ ಪೂಜೆಯ ಮೂಲಕ ದೈವೀ ಸುರಕ್ಷಾ ಕವಚವನ್ನು ಸೃಷ್ಟಿಸಿ ಒಂದು ಸ್ಥಳದಲ್ಲಿ ಇಟ್ಟಿರುತ್ತಾರೆ. ಅದು ಎಲ್ಲಿದೆ ಎಂದು ತಿಳಿಯದೆ ವಾಮಾಚಾರಿಗಳ ಗುರು ಧಾರಕ, ಅವನ ಬಂಟ ಹಿನ್ನುಡಿ ಮತ್ತವನ ಅಸಂಖ್ಯಾತ ಶಿಷ್ಯರು ಹುಡುಕುತ್ತಿರುತ್ತಾರೆ. ಜೋಯಿಸರ ಮನೆಗೆ ಮಗನಾಗಿ ಪಾತ್ರ ಮಾಡಲು ಬಂದ ಅನಿಲ್ (ಶರಣ್) ಯಾರು? ಆತನಿಗೂ ಮನೆಗೂ ಏನು ಸಂಬಂಧ? ಆತ ಕೇವಲ ಪಾತ್ರ ಮಾಡಲು ಬಂದವ ಎಂದು ತಿಳಿದರೆ ಮನೆಯವರ ಪ್ರತಿಕ್ರಿಯೆ ಏನು? ರಾಮ ಜೋಯಿಸರ ಮನೆಯ ಮೇಲೆ ಒಳಗಿಂದೊಳಗೆ ನಡೆಯುವ ಮಸಲತ್ತುಗಳು ಯಾವುವು? ಎಂಬುದನ್ನೆಲ್ಲ ತಿಳಿಯಲು, ವಾಮಾಚಾರ, ಮಾಟ ಮಂತ್ರ ತಂತ್ರಗಳನ್ನೊಳಗೊಂಡ ಸಸ್ಪೆನ್ಸ್ ಥ್ರಿಲ್ಲರ್ ಕಾಮಿಡಿಯನ್ನು ಅನುಭವಿಸಲು ನೀವೊಮ್ಮೆ ಚಿತ್ರ ನೋಡಲೇಬೇಕು.
ಅಂದ ಹಾಗೆ ಇದು ಮೊದಲ ಭಾಗ ಮಾತ್ರ. ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ಮುಂದಿನ ಭಾಗಕ್ಕೆ ಬೇಕಾದ ಒಂದು ಗಟ್ಟಿ ಅಡಿಪಾಯವನ್ನ ಹಾಕಿ ಪಾರ್ಟ್-2 ಕಡೆ ಕುತೂಹಲ ಹೆಚ್ಚಿಸಿ ಕೊಡುವಲ್ಲಿ ನಿರ್ದೇಶಕರು ಯಶಸ್ವೀಯಾಗಿದ್ದಾರೆ. ಆದರೆ ಸಸ್ಪೆನ್ಸ್ ಕಾಮಿಡಿ ಸಿನೆಮಾದ ಚಿತ್ರ ಕತೆಯಲ್ಲಿ ಮತ್ತಷ್ಟು ಬಿಗಿತನ ಬೇಕಿತ್ತು ಎಂಬ ಭಾವ ಚಿತ್ರ ನೋಡುವಾಗ ನಿಮ್ಮಲ್ಲೂ ಬರಬಹುದು. ಉಳಿದಂತೆ ವಿಲಿಯಂ ಡೇವಿಡ್ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ, ಹಾಡುಗಳು, ಕೊರಿಯೋಗ್ರಫಿ ಚಿತ್ರದ ಪ್ಲಸ್ ಪಾಯಿಂಟ್ಸ್. ಹೋಂಡಾ ಸಾಂಗ್ ಕೇಳೋಕೂ ನೋಡೋಕು ಕಚಗುಳಿ ಇಡುವಂತಿದ್ದರೆ, ಲಡ್ಡು ಬಂದು ಬಾಯಿಗೆ ಬಿತ್ತಾ ಹೊಸ ಪರಿಕಲ್ಪನೆಯೊಂದಿಗೆ ಇಷ್ಟವಾಗುತ್ತೆ. ಕ್ಲೈ ಮ್ಯಾಕ್ಸ್ ಚಿತ್ರದ ಹೈಲೈಟ್ ಗಳಲ್ಲಿ ಒಂದು. ಅಲ್ಲಿಯವರೆಗೆ ಕಾಮಿಡಿ ಮಾಡುತ್ತಾ ಚಿತ್ರದುದ್ದಕ್ಕೂ ಕಾಣುತ್ತಿದ್ದ ಅನಿಲನ (ಶರಣ್) ಪಾತ್ರ ಒಮ್ಮೆಲೇ ಗಂಭೀರವಾಗಿಬಿಡುತ್ತೆ. ಶ್ರೀನಗರ ಕಿಟ್ಟಿಯ ಪ್ರವೇಶ ಕೂಡ ಆಗುವುದು ಅಲ್ಲೇ. ಕಿಟ್ಟಿ ಕೊನೆಯಲ್ಲಿ ಬಂದರೂ ಭಾಗ-2 ರಲ್ಲಿ ತನ್ನದೇ ಹವಾ ಎನ್ನುವದನ್ನು ಪಾತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ನಟನೆಯಲ್ಲಿ ಶರಣ್ ವಿಭಿನ್ನ ಶೇಡ್ ಗಳೊಂದಿಗೆ ಇಷ್ಟವಾಗುತ್ತಾರೆ. ನಾಯಕಿ ಆಶಿಕಾ ರಂಗನಾಥ್ ಮುದ್ದು ಮುದ್ದಾಗಿ ಹಿಡಿಸುತ್ತಾಳೆ. ರಾಮ ಜೋಯಿಸನಾಗಿ ಸಾಯಿಕುಮಾರ್, ನೆಗೆಟಿವ್ ಶೇಡ್ ನಲ್ಲಿ ಬಿ ಸುರೇಶ, ತಾಯಿಯಾಗಿ ಭವ್ಯ, ವಾಮಾಚಾರಿ ಗುರುವಾಗಿ ಅಶುತೋಷ್ ರಾಣಾ, ಹಿನ್ನುಡಿಯಾಗಿ ಬಾಲಾಜಿ ಮನೋಹರ್ ಪಾತ್ರವೇ ತಾವಾಗಿ ಅಭಿನಯಿಸಿದ್ದಾರೆ. ಕ್ಲೈ ಮ್ಯಾಕ್ಸ್ ನಲ್ಲಿ ಕತೆಗೆ ಟ್ವಿಸ್ಟ್ ನೀಡುವ ಕುಮಾರನಾಗಿ ಶ್ರೀನಗರ ಕಿಟ್ಟಿ ಗಂಭೀರ ನಟನೆ ಥ್ರಿಲ್ ನೀಡುತ್ತದೆ. ಚಿತ್ರದಲ್ಲಿ ಎರಡೇ ಎರಡು ಸೀನ್ ಗಳಲ್ಲಿ ಬರುವ ಸಾಧುಕೋಕಿಲ ಪಕ್ಕಾ ನಗಿಸುತ್ತಾರೆ. ಚಿತ್ರಕ್ಕೂ ಸಾಧು ಪಾತ್ರಕ್ಕೂ ಈ ಭಾಗದಲ್ಲಿ ಸಂಬಂಧ ಕಲ್ಪಿಸಿಲ್ಲ. ಬಹುಶ ಭಾಗ-2ರಲ್ಲಿ ಸಾಧುಕೋಕಿಲ ಪಾತ್ರಕ್ಕೂ ಚಿತ್ರದ ಕಥೆಗೂ ಸಂಬಂಧ ಏನು ಎನ್ನುವುದು ತಿಳಿಯಬಹುದು. ಅವತಾರ ಪುರುಷ ಭಾಗ-1, ಚಿತ್ರದ ಮುಂದಿನ ಭಾಗಕ್ಕೆ ಅಗತ್ಯವಾದ ಒಂದು ಭದ್ರ ಅಡಿಪಾಯ ಎಂದೇ ಹೇಳಬಹುದು. ಸುಮಾರು 2 ವರ್ಷ ಶರಣ್ ಕಾಮಿಡಿ ಮಿಸ್ ಮಾಡಿಕೊಂಡಿದ್ದವರು, ಸಸ್ಪೆನ್ಸ್ ಥ್ರಿಲ್ಲರ್ ಇಷ್ಟವಾಗುವವರು, ಬ್ಲಾಕ್ ಮ್ಯಾಜಿಕ್ ವಾಮಾಚಾರ ಅಂದ್ರೆ ಏನು ಎನ್ನುವ ಕುತೂಹಲ ಇದ್ದವರು, ಒಟ್ಟಿನಲ್ಲಿ ಕೊಟ್ಟ ಕಾಸಿಗೆ ಮೋಸವಾಗದಂತೆ ಪಕ್ಕಾ ಮನರಂಜನೆ ಬೇಕೆನ್ನುವವರು ಚಿತ್ರ ನೋಡಬಹುದು.
ನಮ್ಮ ರೇಟಿಂಗ್ : 5 ರಲ್ಲಿ 3.5