National

ತಾಲಿಬಾನಿಗೆ ತಲೆಬಾಗಿದ ಆಫ್ಗಾನ್ ಸರಕಾರ: ಮುಲ್ಲಾ ಬರದಾರ್ ಹೊಸ ಅಧ್ಯಕ್ಷ ಸಾಧ್ಯತೆ

ಕಾಬೂಲ್ : ಹಲವು ವಾರಗಳ ಕಾಲ ಸಂಘರ್ಷ ನಡೆಸಿ ಒಂದೊಂದೇ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಇಂದು ಕಾಬೂಲ್ ಪ್ರವೇಶಿಸಿದ್ದು ಬೇರೆ ಯಾವುದೇ ಆಯ್ಕೆ ಇಲ್ಲದ ಅಫ್ಘಾನ್ ಸರಕಾರ ಅಧಿಕಾರ ಹಸ್ತಾಂತರಕ್ಕೆ ಮುಂದಾಗಿದೆ.

ಅಫ್ಘಾನ್ ನ ಎಲ್ಲಾ ಗಡಿ ಪ್ರದೇಶಗಳು ತಾಲಿಬಾನ್ ತೆಕ್ಕೆಯಲ್ಲಿದ್ದು ಕಾಬೂಲ್ ಪ್ರವೇಶದ ಸಂದರ್ಭ ತಾಲಿಬಾನಿಗಳಿಗೆ ಯಾವುದೇ ಪ್ರತಿರೋಧ ತೋರಿ ಬರಲಿಲ್ಲ. ಯಾವುದೇ ಹಿಂಸಾಚಾರವಿಲ್ಲದೆ ಅಧಿಕಾರ ಹಸ್ತಾಂತರ ನಡೆಯುವುದು ತಾಲಿಬಾನ್ ಇಚ್ಛೆಯಾಗಿದ್ದು ಅದಕ್ಕೆ ಪೂರಕವಾಗಿ ಅಫ್ಘಾನ್ ಸರಕಾರ ಅಧಿಕಾರ ಹಸ್ತಾಂತರಕ್ಕೆ ತಯಾರಾಗಿದೆ. ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಶೀಘ್ರದಲ್ಲಿ ಅಧಿಕಾರ ಹಸ್ತಾಂತರ ಮಾಡಲಿದ್ದು ಈಗಾಗಲೇ ತಾಲಿಬಾನ್ ಉಪ ನಾಯಕ ಮುಲ್ಲಾ ಬರದಾರ್ ಅಫ್ಘಾನಿಗೆ ಆಗಮಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ತಾಲಿಬಾನಿನ ಮುಲ್ಲಾ ಬರದಾರ್ ಅಫ್ಘಾನಿಸ್ಥಾನದ ನೂತನ ಅಧ್ಯಕ್ಷರಾಗಲಿದ್ದಾರೆ.

ಕಾಬುಲ್’ನ ಶಾಂತಿಯುತ ಶರಣಾಗತಿಗಾಗಿ ಹಾಗು ಅಧಿಕಾರ ಹಸ್ತಾಂತರಕ್ಕಾಗಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಯುತ್ತಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದಾರೆ. ಸೆಪ್ಟೆಂಬರ್ 11, 2001ರ ದಾಳಿಯ ಬಳಿಕ ಅಮೇರಿಕ ಪಡೆಗಳು ತಾಲಿಬಾನಿಗಳನ್ನು ಅಫ್ಘಾನಿಸ್ತಾನದಿಂದ ಹೊರದಬ್ಬಿದ 20 ವರ್ಷಗಳ ನಂತರ ತಾಲಿಬಾನಿಗಳು ಮರಳಿ ಕಾಬೂಲ್ ಪ್ರವೇಶಿಸಿದ್ದು ಅಧಿಕಾರದ ಸನಿಹದಲ್ಲಿದ್ದಾರೆ.

ತಾಲಿಬಾನಿಗಳು ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗುತ್ತಿದ್ದಂತೆ ಭಾರತ ಸರಕಾರ ಅಫ್ಘಾನಿಸ್ತಾನದಲ್ಲಿರುವ ಭಾರತೀಯ ರಾಜತಾಂತ್ರಿಕರು ಮತ್ತು ನಾಗರಿಕರನ್ನು ರಕ್ಷಿಸಲು ಮುಂದಾಗಿದೆ. ಭಾರತೀಯ ವಾಯುಪಡೆಯ ಹೆವಿ ಲಿಫ್ಟ್ ವಿಮಾನಗಳು, ವಿಶೇಷವಾಗಿ ಸಿ 17 ಗ್ಲೋಬ್‌ಮಾಸ್ಟರ್‌ಗಳು ಹಲವು ದಿನಗಳಿಂದ ಸಜ್ಜಾಗಿ ನಿಂತಿದ್ದು ಯಾವುದೇ ಸಂದರ್ಭದಲ್ಲಿ ಸ್ಥಳಾಂತರಿಸುವಿಕೆಗೆ ತಯಾರಾಗಿದೆ.

Exit mobile version