
ಮುಂಬಯಿ : ಭಾರತದ ಗಾನಕೋಗಿಲೆ ಎಂದೇ ಖ್ಯಾತರಾಗಿರುವ ಭಾರತ ರತ್ನ ಲತಾ ಮಂಗೇಶ್ಕರ್ ಅವರು ಇಂದು ಭಾನುವಾರ ಬೆಳಗ್ಗೆ ಕೋಟ್ಯಂತರ ಅಭಿಮಾನಿಗಳನ್ನು ಅಗಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಕೋವಿಡ್ ಪಾಸಿಟಿವ್ ಹಿನ್ನಲೆಯಲ್ಲಿ ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದ ಲತಾ ಮಂಗೇಶ್ಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ ಮಾತ್ರವಲ್ಲದೆ 92 ವರ್ಷದ ಲತಾ ಮಂಗೇಶ್ಕರ್ ಬಹು ಅಂಗಾಂಗ ವೈಫಲ್ಯವನ್ನು ಹೊಂದಿದ್ದರು.
ಕೋವಿಡ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕಳೆದ ಜನವರಿ 8ರಂದು ಲತಾ ಮಂಗೇಶ್ಕರ್ ಅವರು ಮುಂಬೈಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿದ್ದರು. ಬಳಿಕ ಆರೋಗ್ಯ ಸ್ಥಿತಿ ಸುಧಾರಣೆಯಾಗಿತ್ತು. ಆದರೆ ನಿನ್ನೆ ಏಕಾಏಕಿ ಲತಾ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಕೂಡಲೇ ಅವರನ್ನು ಐಸಿಯುಗೆ ದಾಖಲಿಸಲಾಗಿತ್ತು.
ಲತಾ ಮಂಗೇಶ್ಕರ್ ನಿಧನರಾದ ಹಿನ್ನಲೆಯಲ್ಲಿ ಕೇಂದ್ರ ಸರಕಾರ ದೇಶಾದ್ಯಂತ 2 ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಿದೆ. 2 ದಿನಗಳ ಕಾಲ ದೇಶಾದ್ಯಂತ ಶೋಕಾಚರಣೆ ನಡೆಯಲಿದ್ದು, ರಾಷ್ಟ್ರಧ್ವಜವು ಅರ್ಧ ಮಟ್ಟದಲ್ಲಿ ಹಾರಾಡಲಿದೆ. ಲತಾ ಮಂಗೇಶ್ಕರ್ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಕೇಂದ್ರ ಸರಕಾರ ಮೂಲಗಳು ತಿಳಿಸಿವೆ.
ಭಾರತ ರತ್ನ ಲತಾ ಮಂಗೇಶ್ಕರ್ ನಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೊವಿಂದ್, ಕೇಂದ್ರ ಸಚಿವರಾದ ಅಮಿತ್ ಷಾ, ನಿತಿನ್ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.












































