
ನವದೆಹಲಿ: ಭಯೋತ್ಪಾದಕರ ಟಾರ್ಗೆಟ್ ಹತ್ಯೆಯಿಂದಾಗಿ ಜೀವ ಭಯ ಹೊಂದಿರುವ ಕಾಶ್ಮೀರಿ ಪಂಡಿತ ನೌಕರರ ಪ್ರತಿಭಟನೆಗೆ ಸಂಬಂಧಿಸಿದಂತೆ ಮಂಗಳವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು,ಬಿಜೆಪಿಯ “ಬಳಸಿ ಬಿಸಾಡುವ ಮತ್ತು ದ್ರೋಹ” ನೀತಿಯೇ ಕಾಶ್ಮೀರಿ ಪಂಡಿತ ನೌಕರರ ದುಸ್ಥಿತಿಗೆ ಕಾರಣ ಎಂದು ಹೇಳಿದ್ದಾರೆ.
“ತಮ್ಮ ಜೀವದ ಹಕ್ಕು ಮತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಕ್ಕೆ ಒತ್ತಾಯಿಸಿ ಕಾಶ್ಮೀರಿ ಪಂಡಿತ ನೌಕರರು ಸುಮಾರು 245ಕ್ಕೂ ಹೆಚ್ಚು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಹಲವು ತಿಂಗಳಿಂದ ಅವರ ಸಂಬಳವನ್ನು ತಡೆಹಿಡಿಯಲಾಗಿದೆ ಮತ್ತು ಅವರ ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಲಾಗುತ್ತಿದೆ” ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಚದೂರದಲ್ಲಿ ಸರ್ಕಾರೀ ಕಚೇರಿಯಲ್ಲಿಯೇ ಕಾಶ್ಮೀರಿ ಪಂಡಿತ್ ಸಮುದಾಯದ ಸರ್ಕಾರೀ ಉದ್ಯೋಗಿ ರಾಹುಲ್ ಭಟ್ ಅವರನ್ನು ಇಸ್ಲಾಂ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು.ಈ ಹತ್ಯೆಯ ನಂತರ ಕಾಶ್ಮೀರಿ ಪಂಡಿತ ನೌಕರರು ಕೆಲಸಕ್ಕೆ ಮರಳಲು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.