
ದೆಹಲಿ: ಸಹ ಶಿಕ್ಷಣ ವ್ಯವಸ್ಥೆಯಿಂದಾಗಿ ಮುಸ್ಲಿಂ ಹುಡುಗಿಯರು ತಮ್ಮ ಧರ್ಮವಾದ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದಾರೆ ಅಥವಾ ತ್ಯಜಿಸುತ್ತಿದ್ದಾರೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಪ್ರತಿಪಾದಿಸಿದೆ. ಹಾಗು ತಾವು ಸಹ-ಶಿಕ್ಷಣಕ್ಕೆ ವಿರುದ್ಧವಾಗಿದ್ದೇವೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಹೇಳಿಕೊಂಡಿದೆ.
ಪ್ರಮುಖ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ, “ಆರ್ಥಿಕ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ದೇಶದಲ್ಲಿ ಧಾರ್ಮಿಕ ಉಗ್ರವಾದವನ್ನು ಪ್ರೋತ್ಸಾಹಿಸಲಾಗುತ್ತಿದೆ” ಎಂದು ಹೇಳಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
“ಧಾರ್ಮಿಕ ದ್ವೇಷ ಮತ್ತು ಮತೀಯತೆಯ ಆಧಾರದ ಮೇಲೆ ಜನರನ್ನು ವಿಭಜಿಸುವ ಈ ಆಟವು ದೇಶವನ್ನು ನಾಶಪಡಿಸುತ್ತದೆ. ಒಬ್ಬ ವ್ಯಕ್ತಿಯನ್ನು ದೀರ್ಘಕಾಲದವರೆಗೆ ನಿಜವಾದ ಸಮಸ್ಯೆಗಳಿಂದ ದಾರಿತಪ್ಪಿಸಲು ಸಾಧ್ಯವಿಲ್ಲ. ರಾಜಕೀಯದ ಬದಲು, ಉದ್ಯೋಗ ಸಂಪನ್ಮೂಲಗಳನ್ನು ಸೃಷ್ಟಿಸದಿದ್ದರೆ, ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡದಿದ್ದರೆ, ಈ ಯುವಕರು ಬೀದಿಗಿಳಿದು ಪ್ರತಿಭಟನೆ ಮಾಡುವ ದಿನ ದೂರವಿಲ್ಲ” ಎಂದು ಮದನಿ ಭಾನುವಾರ ಜಮೀಯತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.
ಧರ್ಮಭ್ರಷ್ಟತೆಯ ಪ್ರಲೋಭನೆಯು ದೇಶದಲ್ಲಿ ಅತೀ ವೇಗವಾಗಿ ಹರಡುತ್ತಿದೆ ಎಂದು ಪ್ರತಿಪಾದಿಸಿದ ಅವರು, ಇದು ಯೋಜಿತ ರೀತಿಯಲ್ಲಿ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ. ಮತ್ತು ಅದರ ಅಡಿಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಮತ್ತು ಹುಡುಗಿಯರನ್ನು “ಗುರಿ” ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿನ ಸಹಶಿಕ್ಷಣ ಪದ್ಧತಿಯಿಂದ ಧರ್ಮಭ್ರಷ್ಟತೆಯ ಪ್ರಲೋಭನೆಯು ಬಲಗೊಳ್ಳುತ್ತಿದ್ದು, ಅದಕ್ಕಾಗಿಯೇ ನಾವು ಇದನ್ನು ವಿರೋಧಿಸುತ್ತಿದ್ದೇವೆ. ಮಾಧ್ಯಮಗಳು ನಮ್ಮ ವಿಚಾರವನ್ನು ಋಣಾತ್ಮಕವಾಗಿ ಮಂಡಿಸಿ ಮೌಲಾನಾ ಮದನಿ ಹೆಣ್ಣುಮಕ್ಕಳ ಶಿಕ್ಷಣದ ವಿರುದ್ಧ ಎಂದು ಪ್ರಚಾರ ಮಾಡಿವೆ. ನಾವು ಸಹ-ಶಿಕ್ಷಣದ ವಿರುದ್ಧವಾಗಿದ್ದರೂ, ನಾವು ಹೆಣ್ಣುಮಕ್ಕಳ ಶಿಕ್ಷಣದ ವಿರುದ್ಧವಲ್ಲ ”ಎಂದು ಅವರು ಹೇಳಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL