
ಕೋಲ್ಕತ್ತಾ: ದೇಶವನ್ನೇ ಬೆಚ್ಚಿ ಬೀಳಿಸಿದ್ದ, ಪಶ್ಚಿಮ ಬಂಗಾಳದ ಬಿರ್ಭೂಮ್ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) 21 ಆರೋಪಿಗಳ ಮೇಲೆ ಸೆಕ್ಷನ್ 147, 148, 149 ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದೆ.
ಶನಿವಾರ (ಮಾರ್ಚ್ 26) ಬಿರ್ಭುಮ್ ಜಿಲ್ಲೆಯ ಬೊಗ್ಟುಯಿ ಗ್ರಾಮವನ್ನು ತಲುಪಿದ ಸಿಬಿಐ ತಂಡ ಮಹಿಳೆಯರು ಹಾಗು ಮಕ್ಕಳು ಸೇರಿ ಎಂಟು ಜೀವಗಳನ್ನು ಬಲಿ ತೆಗೆದುಕೊಂಡ ಹಿಂಸಾಚಾರದ ತನಿಖೆಯನ್ನು ಪ್ರಾರಂಭಿಸಿತು. ಈ ಪ್ರಕರಣದಲ್ಲಿ ಇದುವರೆಗೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮನೋಜ್ ಮಾಳವಿಯಾ ಶುಕ್ರವಾರ ತಿಳಿಸಿದ್ದಾರೆ.
ಮಾರ್ಚ್ 21ರ ಸೋಮವಾರ ಟಿಎಂಸಿ ಪಕ್ಷದ ಕಾರ್ಯಕರ್ತರು ಗ್ರಾಮದಲ್ಲಿ 10 ಮನೆಗಳಿಗೆ ಬೆಂಕಿ ಹಚ್ಚಿ ಅದರಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಜನರನ್ನು ಜೀವಂತ ಸುಟ್ಟು ಹಾಕಿದ್ದರು. ಸ್ಥಳೀಯ ಟಿಎಂಸಿ ನಾಯಕ ಬಾದು ಶೇಖ್ ಹತ್ಯೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಶೇಕ್ ಬೆಮಲಿಗರು ಮತ್ತು ಸಹಚರರು ಗ್ರಾಮದ ಮನೆಗಳನ್ನು ಧ್ವಂಸಗೊಳಿಸಿದರು ಮತ್ತು ಒಳಗಿರುವ ವ್ಯಕ್ತಿಗಳನ್ನು ಕೊಲ್ಲುವ ಉದ್ದೇಶದಿಂದ ಮನೆಗಳಿಗೆ ಬೆಂಕಿ ಹಚ್ಚಿದ್ದರು ಎಂದು ಆರಂಭಿಕ ಹಂತದ ತನಿಖೆಯಿಂದ ತಿಳಿದುಬಂದಿದೆ.
ಸುಮಾರು 20 ಸದಸ್ಯರನ್ನು ಒಳಗೊಂಡ ಸಿಬಿಐ ತಂಡವು ಸ್ಥಳ ಪರಿಶೀಲನೆ ನಡೆಸಿತು. ಈ ಹಿಂದೆ ಟಿಎಂಸಿ ಜಿಲ್ಲಾಧ್ಯಕ್ಷ ಅನುಬ್ರತಾ ಮೊಂಡಲ್ ಅವರು ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಹೇಳಿದ್ದರು. ಆದರೆ ಸಿಬಿಐನ ಎಫ್‌ಐಆರ್ ಅವರ ಹೇಳಿಕೆಯನ್ನು ತಳ್ಳಿಹಾಕಿದೆ.