
ನವದೆಹಲಿ: ಆಹಾರ ಕೊರತೆಯನ್ನು ತಡೆಯುವ ಸಲುವಾಗಿ ಭಾರತ ಗೋಧಿ ರಫ್ತು ನಿಷೇಧವನ್ನು ಹೇರಿದ್ದಕ್ಕಾಗಿ ಪಶ್ಚಿಮ ರಾಷ್ಟ್ರಗಳಿಂದ ಟೀಕೆಗಳ ಸುರಿಮಳೆ ಎದುರಿಸುತ್ತಿರುವ ನಡುವೆ, ನೆರೆಯ ಚೀನಾ ಭಾರತದ ರಕ್ಷಣೆಗೆ ಬಂದಿದೆ. ಚೀನಾ ಸರ್ಕಾರದ ಮುಖವಾಣಿ ಆಗಿರುವ ಗ್ಲೋಬಲ್ ಟೈಮ್ಸ್‌ನಲ್ಲಿನ ಲೇಖನವು ಭಾರತದ ರಫ್ತು ನಿಷೇಧ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.
ಗ್ರೂಪ್ ಆಫ್ ಸೆವೆನ್ (G7) ಕೈಗಾರಿಕೀಕರಣಗೊಂಡ ರಾಷ್ಟ್ರಗಳು ಭಾರತವನ್ನು ಟೀಕಿಸಲು ಇಷ್ಟು ಉತ್ಸುಕತೆ ತೋರಿದರೆ, ಅವರೇ ಏಕೆ ರಫ್ತುಗಳನ್ನು ಹೆಚ್ಚಿಸುವುದಿಲ್ಲ ಮತ್ತು ಆಹಾರ ಮಾರುಕಟ್ಟೆ ಪೂರೈಕೆಯನ್ನು ಸ್ಥಿರಗೊಳಿಸುವುದಿಲ್ಲ ಎಂದು ಚೀನಾ ಕೇಳಿದೆ.
ಇತ್ತೀಚಿಗೆ ಜರ್ಮನಿಯ ಕೃಷಿ ಸಚಿವ ಸೆಮ್ ಒಜ್ಡೆಮಿರ್ ಅವರು ಪತ್ರಿಕಾಗೋಷ್ಠಿ ಒಂದರಲ್ಲಿ “ಪ್ರತಿಯೊಬ್ಬರೂ ರಫ್ತು ನಿರ್ಬಂಧಗಳನ್ನು ವಿಧಿಸಲು ಅಥವಾ ಮಾರುಕಟ್ಟೆಗಳನ್ನು ಮುಚ್ಚಲು ಪ್ರಾರಂಭಿಸಿದರೆ, ಅದು ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತದೆ ” ಎಂದು ಪರೋಕ್ಷವಾಗಿ ಭಾರತದ ಗೋಧಿ ರಫ್ತ್ತು ನಿಷೇಧ ನಿರ್ಧಾರವನ್ನು ಕುಟುಕಿದ್ದರು.
ಭಾರತವು ಎರಡನೇ ಅತಿದೊಡ್ಡ ಗೋಧಿ ಉತ್ಪಾದಕನಾಗಿದ್ದರೂ, ಇದು ಜಾಗತಿಕ ಗೋಧಿ ರಫ್ತಿನ ಒಂದು ಸಣ್ಣ ಭಾಗವನ್ನು ಮಾತ್ರ ಹೊಂದಿದೆ, ಆದರೆ ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ಕೆಲವು ಪ್ರಮುಖ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಗೋಧಿಯನ್ನು ರಫ್ತು ಮಾಡುತ್ತದೆ ಎಂದು ಟೀಕೆಗಳು ಕೇಳಿ ಬಂದಿದ್ದವು.
ಆ ಟೀಕೆಗಳಿಗೆ ತಿರುಗೇಟು ನೀಡಿರುವ ಚೀನಾ ಸರಕಾರದ ಮುಖವಾಣಿ ಪತ್ರಿಕೆ, “ಜಾಗತಿಕ ಆಹಾರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲವು ಪಾಶ್ಚಿಮಾತ್ಯ ದೇಶಗಳು ಗೋಧಿ ರಫ್ತುಗಳನ್ನು ಕಡಿಮೆ ಮಾಡಲು ನಿರ್ಧರಿಸಿದರೆ, ಅವರು ಭಾರತವನ್ನು ಟೀಕಿಸಲು ನೈತಿಕತೆ ಹೊಂದಿರುವುದಿಲ್ಲ. ಭಾರತವು ತನ್ನ ಬೃಹತ್ ಜನಸಂಖ್ಯೆಯನ್ನು ಪೋಷಿಸಲು ತನ್ನದೇ ಆದ ಆಹಾರ ಪೂರೈಕೆಯನ್ನು ಭದ್ರಪಡಿಸಿಕೊಳ್ಳಲು ಭಾರಿ ಒತ್ತಡವನ್ನು ಎದುರಿಸುತ್ತಿದೆ” ಎಂದು ಭಾರತದ ಬೆನ್ನಿಗೆ ನಿಂತಿದೆ.
“ಭಾರತವನ್ನು ದೂಷಿಸುವುದು ಆಹಾರದ ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಆದರೂ ತನ್ನ ಗೋಧಿ ರಫ್ತುಗಳನ್ನು ನಿಲ್ಲಿಸುವ ಭಾರತದ ಕ್ರಮವು ಗೋಧಿ ಬೆಲೆಗಳನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಪಾಶ್ಚಿಮಾತ್ಯ ದೇಶಗಳು ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳ ಆರ್ಥಿಕತೆಗಳ ಮೇಲೆ ಆರೋಪವನ್ನು ಹೊರಿಸಲು ಬಯಸುತ್ತವೆ, ”ಎಂದು ಚೀನಾ ಪತ್ರಿಕಾ ಲೇಖನದಲ್ಲಿ ಹೇಳಿದೆ.