National

ಲಷ್ಕರ್ ಉಗ್ರ ಜಾಲವನ್ನು ಭೇದಿಸಿದ ಸೇನೆ: ಪಾಕ್ ತರಬೇತಿ ಪಡೆದ ಮಹಿಳೆ ಸೇರಿದಂತೆ 7 ಮಂದಿ ಉಗ್ರರ ಬಂಧನ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸೋಮವಾರ ಬಂಡಿಪೋರಾದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (ಎಲ್‌ಇಟಿ)ದ ಭಯೋತ್ಪಾದಕ ಜಾಲವನ್ನು ಭೇದಿಸಿದ್ದು, ಪಾಕಿಸ್ತಾನದಿಂದ ತರಬೇತಿ ಪಡೆದ ಭಯೋತ್ಪಾದಕರು ಮತ್ತು ಮಹಿಳಾ ಭಯೋತ್ಪಾದಕ ಸಹಚರೆ ಸೇರಿದಂತೆ ಒಟ್ಟು ಏಳು ಜನರನ್ನು ಬಂಧಿಸಿದ್ದಾರೆ.

ಬಂಧಿತ ಉಗ್ರರಿಂದ ಪೊಲೀಸರು ದೋಷಾರೋಪಣೆಯ ಸಾಮಗ್ರಿಗಳು ಮತ್ತು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ ಅವರು ಬಳಸುತ್ತಿದ್ದ ಆರು ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ.

“ಇತ್ತೀಚಿನ ಬಂಡಿಪೋರಾ ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ, ಪೊಲೀಸರು ಸಕ್ರಿಯ ಪಾಕಿಸ್ತಾನಿ ತರಬೇತಿ ಪಡೆದ ಭಯೋತ್ಪಾದಕರು, ಇಬ್ಬರು ಹೈಬ್ರಿಡ್ ಭಯೋತ್ಪಾದಕರು ಮತ್ತು ನಾಲ್ವರು ಭಯೋತ್ಪಾದಕ ಸಹಚರರನ್ನು ಬಂಧಿಸುವ ಮೂಲಕ ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್ಇಟಿಯ ಭಯೋತ್ಪಾದನಾ ಘಟಕವನ್ನು ಭೇದಿಸಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ತರಬೇತಿ ಪಡೆದ ಭಯೋತ್ಪಾದಕನನ್ನು ನಡಿಹಾಲ್ ನಿವಾಸಿ ಆರಿಫ್ ಅಜಾಜ್ ಶೆಹ್ರಿ ಎಂದು ಗುರುತಿಸಲಾಗಿದೆ. ಆತ 2018 ರಲ್ಲಿ ವಾಘಾ ಗಡಿಯ ಮೂಲಕ ವೀಸಾದಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ ಮತ್ತು ಅಕ್ರಮ ಶಸ್ತ್ರಾಸ್ತ್ರ ತರಬೇತಿ ಪಡೆದು ಮತ್ತೆ ಈ ಕಡೆಗೆ ನುಸುಳಿದ್ದ. ಇಬ್ಬರು ಹೈಬ್ರಿಡ್ ಭಯೋತ್ಪಾದಕರನ್ನು ರಾಂಪೋರಾ ನಿವಾಸಿ ಅಜಾಜ್ ಅಹ್ಮದ್ ರೇಶಿ ಮತ್ತು ಗುಂಡ್ಪೋರಾ ನಿವಾಸಿ ಶಾರಿಕ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದೆ. ಬಂಧಿತ ಭಯೋತ್ಪಾದಕರಿಗೆ ಭದ್ರತಾ ಪಡೆಗಳು ಮತ್ತು ಇತರ ಸಾಫ್ಟ್ ಟಾರ್ಗೆಟ್‌ಗಳ ಮೇಲೆ, ವಿಶೇಷವಾಗಿ ಬಂಡಿಪೋರಾ ಜಿಲ್ಲೆಯಲ್ಲಿ ದಾಳಿ ನಡೆಸಲು ನಿಯೋಜಿಸಲಾಗಿತ್ತು.

ಮಹಿಳೆ ಸೇರಿದಂತೆ ನಾಲ್ವರು ಭಯೋತ್ಪಾದಕ ಸಹಚರರನ್ನು ಬಂಡಿಪೋರಾದ ನಿವಾಸಿ ರಿಯಾಜ್ ಅಹ್ಮದ್ ಮಿರ್, ತೌಹೀದಾಬಾದ್ ಬಾಗ್‌ನ ಜಿ ಮೊಹಮ್ಮದ್ ವಾಜಾ, ಚಿಟ್ಟಿಬಂಡಿ ಅರಗಂ ನಿವಾಸಿ ಮಕ್ಸೂದ್ ಅಹ್ಮದ್ ಮಲಿಕ್ ಮತ್ತು ತೌಹೀದಾಬಾದ್ ಬಾಗ್‌ನ ಶೀಮಾ ಶಾಫಿ ವಾಜಾ ಎಂದು ಗುರುತಿಸಲಾಗಿದೆ.

Exit mobile version