
ಚಂಡೀಗಢ: ಪಂಜಾಬ್ ಚುನಾವಣೆ ಕಾವೇರುತ್ತಿರುವ ಸಮಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಶನಿವಾರ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲು ನಿರ್ಧರಿಸಿತ್ತು. ಈ ಮಧ್ಯೆ ಅಲ್ಲಿನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ಗಾಂಧೀ ಪರಿವಾರದ ಮೇಲೆ ತಿರುಗಿ ಬಿದ್ದಿದ್ದಾರೆ. ಹಾಲಿ ಮುಖ್ಯಮಂತ್ರಿ ಚನ್ನಿ ಅವರನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಲಿರುವ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಸಿಧು, ಹೈಕಮಾಂಡಿಗೆ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಮುಖ್ಯಮಂತ್ರಿ ಬೇಕು ಎಂದು ಕಿಡಿ ಕಾರಿದ್ದಾರೆ.
ಮುಂದುವರೆದು, “ಒಳ್ಳೆಯ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅವಕಾಶ ಪಂಜಾಬ್ ಮತದಾರರ ಕೈಯಲಿದೆ, ಹೊಸ ಪಂಜಾಬ್ ನಿರ್ಮಾಣವಾಗಬೇಕಾದರೆ ಅದು ಮುಖ್ಯಮಂತ್ರಿ ಕೈಯಲ್ಲಿ ಇರಲಿದೆ. ಈ ಸಲ ಮುಖ್ಯಮಂತ್ರಿಯನ್ನು ನೀವು ಆಯ್ಕೆ ಮಾಡಿದರೆ, ಪಕ್ಷದ ವರಿಷ್ಠರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ದುರ್ಬಲ ಮುಖ್ಯಮಂತ್ರಿಯನ್ನು ಬಯಸುತ್ತಾರೆ. ನಿಮಗೆ ಅಂತಹ ಮುಖ್ಯಮಂತ್ರಿ ಬೇಕಾ?” ಎಂದು ಸಿಧು ಕೇಳಿದ್ದಾರೆ.
ಪಂಜಾಬ್ ನಲ್ಲಿ ವಿಧಾನಸಭಾ ಚುನಾವಣೆ ಕಾವು ರಂಗೇರಿದ್ದು ಇದೇ ಫೆಬ್ರವರಿ 20ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಬಳಿಕ ಸಂಜೆ ಫಲಿತಾಂಶ ಪ್ರಕಟವಾಗಲಿದೆ.