
ನವದೆಹಲಿ: ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್) ಅಧಿಕಾರಿಗಳನ್ನು “ದುರಹಂಕಾರಿ” ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಗಳು ದುರಂಕಾರ ಹೊಂದಿಲ್ಲ ಬದಲಾಗಿ ಆತ್ಮ ವಿಶ್ವಾಸ ಹೊಂದಿದ್ದಾರೆ. ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯೇ ನಮ್ಮ ಆದ್ಯತೆ ಎಂದು ಜೈಶಂಕರ್ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಾಂಧಿ, ಐಎಫ್‌ಎಸ್ ಅಧಿಕಾರಿಗಳು “ಸಂಪೂರ್ಣವಾಗಿ ಬದಲಾಗಿದ್ದಾರೆ” ಎಂದು ಯುರೋಪ್‌ನ ಹಲವಾರು ಅಧಿಕಾರಿಗಳು ತಮಗೆ ದೂರು ನೀಡಿದ್ದಾರೆ ಎಂದು ಹೇಳಿದ್ದರು. “ಅವರು ಅಹಂಕಾರಿಗಳು, ಅವರು ಏನನ್ನೂ ಕೇಳುವುದಿಲ್ಲ. ಈಗ ಅವರು ಯಾವ ಆದೇಶಗಳನ್ನು ಪಡೆಯುತ್ತಿದ್ದಾರೆ ಅದನ್ನು ಮಾತ್ರ ನಮಗೆ ಹೇಳುತ್ತಿದ್ದಾರೆ” ಎಂದು ಗಾಂಧಿ ಹೇಳಿದ್ದರು. ಹೊರ ದೇಶಗಳಿಗೆ ಹೋಗಿ ಅಲ್ಲಿ ಭಾರತವನ್ನು ದೂರುವ ರಾಹುಲ್ ಗಾಂಧೀ ಪ್ರವೃತ್ತಿ ಇದೇ ಮೊದಲೇನಲ್ಲ. ಈ ಹಿಂದೆಯೂ ಭಾರತದ ಪ್ರಧಾನಿಯಾಗುವ ರೇಸ್ ನಲ್ಲಿರುವ ಈ ವ್ಯಕ್ತಿ ಹೊರದೇಶಗಳಲ್ಲಿ ಭಾರತವನ್ನು ಟೀಕಿಸಿರುವ ಉದಾಹರಣೆಗಳು ಇವೆ.
ಇದಕ್ಕೆ ಟಾಂಗ್ ನೀಡಿದ ವಿದೇಶಾಂಗ ಇಲಾಖೆ ಸಚಿವ ಜೈ ಶಂಕರ್, ವಿದೇಶಾಂಗ ಇಲಾಖೆ (ಐಎಫ್‌ಎಸ್) ಅಧಿಕಾರಿಗಳು ಇತರ ದೇಶಗಳ ವಾದಗಳನ್ನು ಎದುರಿಸುವಾಗ ಧೈರ್ಯಶಾಲಿ ಮತ್ತು ಆತ್ಮವಿಶ್ವಾಸ ಮನೋಭಾವ ಹೊಂದಿದ್ದಾರೆ. ಅದು ಅಹಂಕಾರವಲ್ಲ ಎಂದು ಹೇಳಿದರು.
“ಹೌದು, ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ. ಹೌದು, ಅವರು ಸರ್ಕಾರದ ಆದೇಶವನ್ನು ಮಾತ್ರ ಪಾಲಿಸುತ್ತಾರೆ. ಹೌದು, ಅವರು ಇತರ ರಾಷ್ಟ್ರಗಳ ವಾದಗಳನ್ನು ವಿರೋಧಿಸುತ್ತಾರೆ. ಅದನ್ನು ಅಹಂಕಾರ ಎಂದು ಕರೆಯಲಾಗುವುದಿಲ್ಲ. ಅದನ್ನು ಆತ್ಮವಿಶ್ವಾಸ ಎಂದು ಕರೆಯಲಾಗುತ್ತದೆ. ಮತ್ತು ಇದನ್ನು ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸುವುದು ಎಂದು ಕರೆಯಲಾಗುತ್ತದೆ” ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.