
ಕೋಪನ್ ಹ್ಯಾಗನ್: ಭಾನುವಾರ ತಡರಾತ್ರಿ ಡೆನ್ಮಾರ್ಕ್ ರಾಜಧಾನಿ ಕೋಪನ್ ಹ್ಯಾಗನ್ ನ ಶಾಪಿಂಗ್ ಮಾಲ್ ನಲ್ಲಿ ಬಂಧೂಕುಧಾರಿಯೊಬ್ಬನಿಂದ ಗುಂಡಿನ ದಾಳಿ ನಡೆದಿದೆ. ಈ ಗುಂಡಿನ ದಾಳಿಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಧಾಳಿ ನಡೆಸಿದ 22 ವರ್ಷದ ಡ್ಯಾನಿಶ್ ಯುವಕನನ್ನು ಬಂಧಿಸಲಾಗಿದೆ. ಆದರೆ, ಇಲ್ಲಿಯವರೆಗೆ ಪೊಲೀಸರು ಗುಂಡಿನ ದಾಳಿಯನ್ನು ಮಾತ್ರ ಖಚಿತಪಡಿಸಿದ್ದಾರೆ. ಇದರ ಹಿಂದೆ ಯಾವುದೇ ಭಯೋತ್ಪಾದನಾ ಸಂಘಟನೆಯ ಕೈವಾಡ ಇದೆಯೇ ಎಂಬ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ.
ಈ ಘಟನೆಯ ಹಿಂದೆ ಭಯೋತ್ಪಾದಕ ಉದ್ದೇಶ ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಕೋಪನ್ ಹ್ಯಾಗನ್ ಪೊಲೀಸ್ ಕಾರ್ಯಾಚರಣೆ ಘಟಕದ ಮುಖ್ಯಸ್ಥ ಸೊರೆನ್ ಥಾಮ್ಸನ್ ಹೇಳಿದ್ದಾರೆ. ಈ ಘಟನೆಯಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆಯೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ, ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಾಥಮಿಕ ಮಾಹಿತಿ ಪ್ರಕಾರ ಫೀಲ್ಡ್ಸ್ ಶಾಪಿಂಗ್ ಮಾಲ್ ನಲ್ಲಿ ರಜಾ ದಿನವಾದ ಕಾರಣ ಇಲ್ಲಿ ಸಾಕಷ್ಟು ಜನ ಸೇರಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಇದ್ದಕ್ಕಿದ್ದಂತೆ ಗುಂಡು ಹಾರಿಸುವ ಮತ್ತು ಕಿರುಚುವ ಶಬ್ದಗಳು ಕೇಳಿಬಂದವು. ಇದಾದ ನಂತರ ಕಾಲ್ತುಳಿತ ಉಂಟಾಗಿ ಜನರು ಹೊರಗೆ ಓಡಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.