
ಮುಂಬಯಿ: ಮಂಗಳವಾರ ಶಿವಸೇನೆ ನಾಯಕ ಏಕನಾಥ್ ಶಿಂಧೆ ಮತ್ತು ಇತರ ಹಲವಾರು ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದ ಬಳಿಕ ಕಂಡುಬಂದ ರಾಜಕೀಯ ಅನಿಶ್ಚಿತತೆಯ ಮುಂದುವರೆದಿದ್ದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ. ಇಂದು ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ ಮತ್ತು ಇತರ ಶಾಸಕರು ಬೆಳಗ್ಗೆ ಅಸ್ಸಾಂನ ಗುವಾಹಟಿಗೆ ಆಗಮಿಸಿದ್ದಾರೆ. ಸುಮಾರು 40 ಶಾಸಕರು ಅವರ ಹಿಂದೆ ಇದ್ದಾರೆ ಎಂದು ಬಂಡಾಯಗಾರರು ಹೇಳಿಕೊಂಡಿದ್ದಾರೆ.
ಈ ಮಧ್ಯೆ ಬಂಡಾಯಗಾರರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಬಿಜೆಪಿ ಮಾತುಕತೆ ನಡೆಸುತ್ತಿದ್ದು ಈ ಆಪರೇಷನ್ ಕಮಲ ಕಾರ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕದ ಸಿಟಿ ರವಿ ನೇತೃತ್ವ ವಹಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಟಿ ರವಿ ಜತೆಗೆ ಕೇಂದ್ರ ಸಚಿವ ಭೂಪಿಂದರ್ ಯಾದವ್ ಮುಂದಾಳತ್ವ ವಹಿಸಿದ್ದಾರೆ ಎನ್ನಲಾಗಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಶಿಂಧೆ ಮತ್ತು ಇತರ ಶಾಸಕರು ಬಿಜೆಪಿ ಸೇರಬಹುದು ಎಂಬ ವರದಿಗಳಿವೆ. ಶಿಂಧೆ ಮತ್ತು ಬಂಡಾಯ ಶಾಸಕರೊಂದಿಗೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಕೇಂದ್ರ ಸಚಿವ ಭೂಪೇಂದರ್ ಯಾದವ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ವಹಿಸಲಾಗಿದೆ.
ಈಗಾಗಲೇ ಶಿವಸೇನೆಯ ಬಂಡಾಯದ ಹಿಂದೆ ಬಿಜೆಪಿ ಇರುವುದು ಸ್ಪಷ್ಟವಾಗಿದ್ದು ಬಂಡಾಯಗಾರರಿಗೆ ಮೊದಲು ಆಶ್ರಯ ನೀಡಿದ್ದ ಗುಜರಾತಿನಲ್ಲಿ ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಎಲ್ಲ ರೀತಿಯ ನೆರವು ನೀಡಿದ್ದರು. ಇದೀಗ ಅಸ್ಸಾಂನ ಗೌಹಾಟಿಗೆ ಶಿಫ್ಟ್ ಆಗಿರುವ ಬಂಡಾಯಗಾರರಿಗೆ ಅಲ್ಲಿನ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮ ಆಶ್ರಯ ನೀಡಿದ್ದಾರೆ. ಈ ಮೂಲಕ ಈ ಇಬ್ಬರೂ ಬಂಡಾಯಗಾರರಿಗೆ ಆಶ್ರಯದಾತರಾಗಿ ಗುರುತಿಸಿಕೊಂಡಿದ್ದಾರೆ.
ಇಂದು ಬೆಳಿಗ್ಗೆ ಗುವಾಹಟಿಗೆ ಹಾರುವ ಮೊದಲು ಏಕನಾಥ್ ಶಿಂಧೆ ಮತ್ತು ಇತರ ಸೇನಾ ಶಾಸಕರು ಗುಜರಾತಿನ ಸೂರತ್‌ನ ಹೋಟೆಲ್‌ನಲ್ಲಿ ತಂಗಿದ್ದರು. ಮೂಲಗಳ ಪ್ರಕಾರ, ಗುಜರಾತ್ ಬಿಜೆಪಿ ಘಟಕದ ಮುಖ್ಯಸ್ಥ ಸಿಆರ್ ಪಾಟೀಲ್, ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಬಂಡಾಯದ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ. ಶಿಂಧೆ ಮತ್ತು ಅವರ ಬೆಂಬಲಿಗರ ಆಗಮನದ ನಂತರ ಸಿಆರ್ ಪಾಟೀಲ್ ಅವರು ತಮ್ಮ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಶಾಸಕರ ಮೇಲ್ವಿಚಾರಣೆಗಾಗಿ ಅವರು ಅಹಮದಾಬಾದ್‌ನಿಂದ ಸೂರತ್‌ಗೆ ಧಾವಿಸಿದ್ದರು.
ಬುಧವಾರ, ಶಿಂಧೆ ನೇತೃತ್ವದಲ್ಲಿ 40 ಶಾಸಕರು ಬಿಜೆಪಿ ಆಡಳಿತದ ಅಸ್ಸಾಂನ ರಾಜಧಾನಿಗೆ ಬಂದಿಳಿದ ಕಾರಣ ಗಮನವು ಸೂರತ್‌ನಿಂದ ಗುವಾಹಟಿಯತ್ತ ಹರಿಯಿತು. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಹಾರಾಷ್ಟ್ರ ಶಾಸಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ ಬಂಡಾಯ ಶಾಸಕರು ತಂಗುವ ಗುವಾಹಟಿಯ ರಾಡಿಸನ್ ಬ್ಲೂ ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗುವಾಹಟಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ಶಾಸಕ ಸುಶಾಂತ ಬೊರ್ಗೊಹೈನ್ ಶಿವಸೇನೆ ಶಾಸಕರನ್ನು ಸ್ವಾಗತಿಸಿದರು. ಮಾಜಿ ಕಾಂಗ್ರೆಸ್ ಶಾಸಕ ಸುಶಾಂತ ಬೊರ್ಗೊಹೈನ್ ಅವರು ಆಗಸ್ಟ್ 1, 2021 ರಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬೊರ್ಗೊಹೈನ್ ಅವರು ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL













































