ಗುರುಗ್ರಾಮ : ಹರಿಯಾಣದ ಗುರುಗ್ರಾಮ್‌ನಲ್ಲಿ 27 ವರ್ಷದ ಮಾಡೆಲ್ ದಿವ್ಯಾ ಪಹುಜಾ ಅವರನ್ನು ಹೋಟೆಲ್‌ನಲ್ಲಿ ಕೊಲೆ ಮಾಡಲಾಗಿದೆ. ದಿವ್ಯಾ ಪಹುಜಾ ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿಯ ಮಾಜಿ ಗೆಳತಿ. ಇನ್ನು ದಿವ್ಯಾ ಕೊಲೆ ಆರೋಪದಡಿ ಪೊಲೀಸರು ಬಂಧಿಸಿರುವ ಆರೋಪಿಗಳ ವಿಚಾರಣೆ ವೇಳೆ ಹಲವು ದೊಡ್ಡ ಸಂಗತಿಗಳು ಬೆಳಕಿಗೆ ಬಂದಿವೆ. ಮಂಗಳವಾರ ತಡರಾತ್ರಿ ಕೊಲೆ ನಡೆದಿದೆ.

ರೂಪದರ್ಶಿ ದಿವ್ಯಾ ಗುರುಗ್ರಾಮದ ಬಲದೇವ್ ನಗರದ ನಿವಾಸಿಯಾಗಿದ್ದರು. ಈಕೆ ಹರಿಯಾಣದ ದರೋಡೆಕೋರ ಸಂದೀಪ್ ಗಡೋಲಿಯ ಮಾಜಿ ಗೆಳತಿಯಾಗಿದ್ದಳು. 2018 ರಲ್ಲಿ ಬಿಕಾಂ ವ್ಯಾಸಂಗ ಆರಂಭಿಸಿದ ದಿವ್ಯಾ ಇದೇ ಸಂದರ್ಭದಲ್ಲಿ ಮಾಡೆಲಿಂಗ್ ಪ್ರಾರಂಭಿಸಿದರು. ದಿವ್ಯಾ ಅವರ ತಂದೆ ಅಂಗವಿಕಲರಾಗಿದ್ದು, ಅವರು ತರಕಾರಿ ಮತ್ತು ಹಣ್ಣು ಮಾರಾಟ ಮಾಡುತ್ತಿದ್ದಾರೆ. ಆಕೆಗೊಬ್ಬ ಕಿರಿಯ ಸಹೋದರಿ ಇದ್ದು, ಪೋಷಕರೂ ಇದ್ದಾರೆ.
ದರೋಡೆಕೋರ ಸಂದೀಪ್ ಗಡೋಲಿ ಅವರನ್ನು ಎನ್‌ಕೌಂಟರ್ ಮಾಡುವಾಗ ದಿವ್ಯಾ ಮುಂಬೈನ ಅದೇ ಹೋಟೆಲ್‌ನಲ್ಲಿ ಇದ್ದರು. ಗ್ಯಾಂಗ್‌ಸ್ಟರ್ ಸಂದೀಪ್ ಗಡೋಲಿ ಎನ್‌ಕೌಂಟರ್ ಪ್ರಕರಣದ ಪ್ರಮುಖ ಸಾಕ್ಷಿಯೂ ಆಗಿದ್ದಳು. ಹರಿಯಾಣ ಪೊಲೀಸರು ಸಂದೀಪ್ ಗಡೋಲಿಯನ್ನು ಎನ್‌ಕೌಂಟರ್ ಮಾಡಿದಾಗ, ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು. ಮುಂಬೈ ಪೊಲೀಸರು ಈ ಪ್ರಕರಣದಲ್ಲಿ ದಿವ್ಯಾಳನ್ನು ಸಾಕ್ಷಿಯನ್ನಾಗಿಸಿದ್ದರು.
ದಿವ್ಯಾ ಕೊಲೆ ಆರೋಪದ ಮೇಲೆ ಹೋಟೆಲ್ ಮಾಲೀಕ ಅಭಿಜೀತ್ ಸಿಂಗ್, ಓಂ ಪ್ರಕಾಶ್ ಮತ್ತು ಹೋಟೆಲ್ ಕಾರ್ಮಿಕರಾದ ಓಂ ಪ್ರಕಾಶ್ ಮತ್ತು ಹೇಮರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ದಿವ್ಯಾ ಶವವನ್ನು ವಿಲೇವಾರಿ ಮಾಡಲು ಓಂ ಪ್ರಕಾಶ್ ಮತ್ತು ಹೇಮರಾಜ್ ಸಹಾಯ ಮಾಡಿದ್ದರು.












































