
ಗೊರಖ್ಪುರ: ಉತ್ತರ ಪ್ರದೇಶದ ಗೋರಖನಾಥ ದೇವಾಲಯದ ದಾಳಿ ಪ್ರಕರಣದ ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್ಐಎಸ್) ಜೊತೆ ಸಂಪರ್ಕದಲ್ಲಿದ್ದರು ಎಂದು ಉತ್ತರ ಪ್ರದೇಶ ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಏಪ್ರಿಲ್ 3 ರಂದು ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿ ದೇವಸ್ಥಾನದ ಆವರಣಕ್ಕೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ ಮತ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ದಾಳಿ ಮಾಡಿದ ಗೋರಖನಾಥ ದೇವಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿ ಭಯೋತ್ಪಾದನಾ ನಿಗ್ರಹ ದಳ (ಯುಪಿ ಎಟಿಎಸ್) ನಡೆಸಿದ ತನಿಖೆಯ ಬಗೆಗಿನ ಕೆಲ ತುಣುಕುಗಳನ್ನು ಕುಮಾರ್ ಭಾನುವಾರ ಹಂಚಿಕೊಂಡರು. ಬಂದೂಕು ಕಸಿದುಕೊಂಡು ದೊಡ್ಡ ಕಾರ್ಯಾಚರಣೆ ನಡೆಸುವ ಉದ್ದೇಶ ಆರೋಪಿಗಳಿಗೆ ಇತ್ತು ಎಂದು ಕುಮಾರ್ ಮಾಹಿತಿ ನೀಡಿದ್ದಾರೆ.
“ಅವರು ಗೋರಖನಾಥ ದೇವಾಲಯದ ದಕ್ಷಿಣ ದ್ವಾರದಲ್ಲಿ ಮಾರಣಾಂತಿಕ ದಾಳಿ ನಡೆಸಿದರು ಮತ್ತು ಕರ್ತವ್ಯದಲ್ಲಿದ್ದ ಭದ್ರತಾ ಅಧಿಕಾರಿಗಳ ರೈಫಲ್ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು. ರೈಫಲ್ ಕಸಿದುಕೊಂಡು ದೊಡ್ಡ ಕಾರ್ಯಾಚರಣೆ ನಡೆಸುವುದು ಅವರ ಉದ್ದೇಶವಾಗಿತ್ತು” ಎಂದು ಅವರು ಹೇಳಿದರು.
ಆರೋಪಿ ಅಹ್ಮದ್ ಮುರ್ತಾಜಾ ಅಬ್ಬಾಸಿಯನ್ನು ಯುಪಿ ಎಟಿಎಸ್ ತನಿಖೆ ನಡೆಸಿದ ನಂತರ, ಆತನ ಜಿಮೇಲ್, ಟ್ವಿಟರ್, ಫೇಸ್‌ಬುಕ್ ಮತ್ತು ಇ-ವ್ಯಾಲೆಟ್‌ಗಳಂತಹ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ಡೇಟಾ ವಿಶ್ಲೇಷಣೆ ನಡೆಸಲಾಯಿತು” ಎಂದು ಪೊಲೀಸ್ ಅಧಿಕಾರಿ ಹೇಳಿದರು. ಆತನ ಬ್ಯಾಂಕ್ ಖಾತೆಯಿಂದ ಐಸಿಸ್ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಲು ಸುಮಾರು 8.5 ಲಕ್ಷ ಭಾರತೀಯ ರೂಪಾಯಿಗಳನ್ನು ಟ್ರಾನ್ಸ್ಫರ್ ಮಾಡಲಾಗಿತ್ತು. ಈ ವರ್ಗಾವಣೆಯನ್ನು ಐಸಿಸ್ ಸಂಬಂಧಿತ ಸಂಘಟನೆಗಳ ಮೂಲಕ ಮಾಡಲಾಗಿತ್ತು ಎಂದು ಅವರು ಹೇಳಿದರು.
ಆರೋಪಿಯ ಕ್ರಿಮಿನಲ್ ಇತಿಹಾಸವನ್ನು ಹಂಚಿಕೊಂಡ ಎಡಿಜಿ, “ಐಸಿಸ್ ಪ್ರಚಾರ ಕಾರ್ಯಕರ್ತ ಮೆಹದಿ ಮಸ್ರೂರ್ ಬಿಸ್ವಾಸ್‌ನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಈತನನ್ನು 2014 ರಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದರು. ಅವರುಗಳು ಭಯೋತ್ಪಾದಕ ಸಂಘಟನೆಗಳು, ಮುಸ್ಲಿಂ ಮೂಲಭೂತ ಬೋಧಕರು ಮತ್ತು ಐಸಿಸ್ ಭಯೋತ್ಪಾದಕ ಪ್ರವರ್ತಕರಿಂದ ಪ್ರಭಾವಿತರಾಗಿದ್ದರು” ಎಂದು ಹೇಳಿದರು.