
ನವದೆಹಲಿ: ಕರ್ನಾಟಕದಿಂದ ಆರಂಭವಾಗಿ ಭಾರತದಲ್ಲಿ ಕಿಡಿ ಹೊತ್ತಿಸಿರುವ ಹಿಜಾಬ್ ವಿವಾದ ಕುರಿತು ಪಾಕಿಸ್ತಾನ, ಅಮೆರಿಕ ಸೇರಿದಂತೆ ಹಲವು ದೇಶಗಳು ಹೇಳಿಕೆಗಳನ್ನು ನೀಡುತ್ತಿವೆ. ಇದರಿಂದ ವಿವಾದ ಕಿಡಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಕಾರಣ ಭಾರತ ವಿದೇಶಗಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಇದು ಸಂಪೂರ್ಣವಾಗಿ ದೇಶದ ಆಂತರಿಕ ವಿಚಾರ. ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ವಿವಾದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಹಿಜಾಬ್ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡುವುದನ್ನು ಭಾರತ ಸರ್ಕಾರ ಒಪ್ಪುವುದಿಲ್ಲ ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಈ ಕುರಿತು ಸ್ಪಷ್ಟನೆ ನೀಡಿ, ನಮ್ಮ ಆಂತರಿಕ ವಿಷಯಗಳ ಬಗ್ಗೆ ಬೇರೆ ದೇಶಗಳ ಹೇಳಿಕೆಗಳು ಸ್ವಾಗತಾರ್ಹವಲ್ಲ ಎಂದು ಹೇಳಿದ್ದಾರೆ.
ಶಾಲೆಗಳಲ್ಲಿ ಹಿಜಾಬ್ ನಿಷೇಧವು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ರಾಯಭಾರಿ ರಶಾದ್ ಹುಸೇನ್ ಶುಕ್ರವಾರವಷ್ಟೇ ಹೇಳಿಕೆ ನೀಡಿದ್ದರು.
ಮತ್ತೊಂದೆಡೆ ಪಾಕಿಸ್ತಾನವು ಹಿಜಾಬ್ ವಿವಾದವನ್ನು ಮುಂದಿಟ್ಟುಕೊಂಡು ಕಳೆದ ಬುಧವಾರ ಇಸ್ಲಾಮಾಬಾದ್ನಲ್ಲಿನ ಭಾರತದ ರಾಯಭಾರಿ ಉಸ್ತುವಾರಿಯನ್ನು ವಾಪಸ್ ಕರೆಸಿತ್ತು. ಭಾರತದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಇರುವ ನಿರ್ಬಂಧಗಳ ಬಗ್ಗೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ ಪಾಕಿಸ್ತಾನದಲ್ಲಿ ನಿರಂತರವಾಗಿ ಧ್ವಂಸಗೊಳ್ಳುತ್ತಿರುವ ಹಿಂದೂ ದೇಗುಲಗಳ ಬಗ್ಗೆ, ಅತ್ಯಾಚಾರ, ಕೊಲೆಗೆ ಈಡಾಗುತ್ತಿರುವ ಹಿಂದೂ ಅಲ್ಪಸಂಖ್ಯಾತರ ಬಗ್ಗೆ ಮಾತ್ರ ಪಾಕಿಸ್ತಾನ ಸರಕಾರ ಡಬಲ್ ಸ್ಟ್ಯಾಂಡರ್ಡ್ ಪ್ರದರ್ಶಿಸುತ್ತಿದೆ.












































