
ಕಾಬೂಲ್: ಮೇ 2011ರಲ್ಲಿ ಅಲ್-ಖೈದಾ ಸಂಸ್ಥಾಪಕ ಮತ್ತು ಆಗಿನ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ನನ್ನು ಪಾಕಿಸ್ತಾನದಲ್ಲಿ ಅಮೇರಿಕ ವಿಶೇಷ ಪಡೆಗಳು ಹತ್ಯೆಗೈದ ಸುಮಾರು 11 ವರ್ಷಗಳ ನಂತರ ಬಿನ್ ಲಾಡೆನ್‌ನ ಉತ್ತರಾಧಿಕಾರಿ ಅಯ್ಮಾನ್ ಅಲ್ ಜವಾಹಿರಿಯನ್ನು ಅಮೇರಿಕ ಡ್ರೋನ್ ಬಳಸಿ ಹೊಡೆದುರುಳಿಸಿದೆ. ಜುಲೈ 30 ರಂದು ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಅಮೇರಿಕ ಡ್ರೋನ್ ಮೂಲಕ ಮಿಸೈಲ್ ಪ್ರಯೋಗಿಸುವ ಮೂಲಕ ಜವಾಹಿರಿಯ ಅಂತ್ಯ ಹಾಡಿದೆ.
ಅಲ್-ಜವಾಹಿರಿಯನ್ನು ಗುರಿಯಾಗಿಸಿ ಕೊಂದ ಡ್ರೋನ್ ದಾಳಿಯನ್ನು ಅಮೇರಿಕಾದ ಕೇಂದ್ರ ಗುಪ್ತಚರ ಸಂಸ್ಥೆ (ಸಿಐಎ) ನಡೆಸಿದೆ. ಸಿಐಎ ಈ ಭಯೋತ್ಪಾದಕ ನಾಯಕನನ್ನು ಹೇಗೆ ಪತ್ತೆಹಚ್ಚಿತು, ಹೇಗೆ ಗುರುತಿಸಿತು ಮತ್ತು ಹೊಡೆದುರುಳಿಸಿತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಗುರುತಿಸುವಿಕೆ:
ಸುದ್ದಿ ಸಂಸ್ಥೆ ರಾಯಿಟರ್ಸ್‌ನೊಂದಿಗೆ ಮಾತನಾಡಿದ ಸಿಐಎ ಅಧಿಕಾರಿಯೊಬ್ಬರು, ಕಳೆದ ವರ್ಷ ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಆ ದೇಶದಲ್ಲಿ ಅಲ್-ಖೈದಾ ಉಪಸ್ಥಿತಿಯ ಮೇಲೆ ನಿಗಾ ಇರಿಸಿದ್ದರು. ಈ ವರ್ಷದ ಆರಂಭದಲ್ಲಿ, ಜವಾಹಿರಿ ಕುಟುಂಬ ಅವರ ಪತ್ನಿ, ಮಗಳು ಮತ್ತು ಮೊಮ್ಮಕ್ಕಳು ಆಫ್ಘನ್ ರಾಜಧಾನಿಯಲ್ಲಿ ಸುರಕ್ಷಿತ ಮನೆಗೆ ಸ್ಥಳಾಂತರಗೊಂಡಿದ್ದಾರೆ ಎಂಬುದನ್ನು ಅಮೇರಿಕ ಕಂಡುಕೊಂಡಿತ್ತು. ಮತ್ತು ಅದೇ ಸ್ಥಳದಲ್ಲಿ ವಾಸವಾಗಿದ್ದಾನೆ ಎಂದು ಗುರುತಿಸಲಾಗಿತ್ತು.
ದೃಢೀಕರಣ:
ಹಲವಾರು ತಿಂಗಳುಗಳ ಕಾಲ ಸಿಐಎ ಅಲ್-ಜವಾಹಿರಿಯ ದೈನಂದಿನ ಜೀವನದ ಆಗುಹೋಗುಗಳನ್ನು ಗಮನಿಸುತ್ತಾ ಬಂತು ಮತ್ತು ಸುರಕ್ಷಿತ ಮನೆಯಲ್ಲಿ ಅವನ ಉಪಸ್ಥಿತಿಯ ಬಗ್ಗೆ ದೃಢಪಡಿಸಿತು. ಜವಾಹಿರಿ ಶಾಶ್ವತವಾಗಿ ಆ ಮನೆಯಲ್ಲಿ ಇರುವುದನ್ನು ದೃಡಪಡಿಸಿದ ನಂತರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಜೇಕ್ ಸುಲ್ಲಿವಾನ್ ಸೇರಿದಂತೆ ಬಿಡೆನ್ ಆಡಳಿತದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು.
ಹೊಡೆಯಲು ಪೂರ್ವಭಾವಿ ತಯಾರಿ:
ಜವಾಹಿರಿ ವಾಸಿಸುವ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ, ಅಲ್ಲಿನ ನಾಗರಿಕರಿಗೆ ಮತ್ತು ಜವಾಹಿರಿಯ ಸಂಬಂಧಿಕರಿಗೆ ಅಪಾಯವನ್ನು ಕಡಿಮೆ ಮಾಡಿ ಅಲ್-ಖೈದಾ ಮುಖ್ಯಸ್ಥನನ್ನು ಕೊಲ್ಲಲು ಯುನೈಟೆಡ್ ಸ್ಟೇಟ್ಸ್ ಕಾರ್ಯಾಚರಣೆಯ ಪೂರ್ವ ತಯಾರಿ ನಡೆಸಿತು. ಬಿಡೆನ್ ಜತೆಗೆ ಹಲವು ಸರಣಿ ಸಭೆಗಳು ನಡೆದು ಚರ್ಚಿಸಲಾಯಿತು.
ಅಂತಿಮ ಸಭೆ ಮತ್ತು ಅಧ್ಯಕ್ಷರ ಆದೇಶ:
ಜುಲೈ 25 ರಂದು ಈ ಕುರಿತು ಅಂತಿಮ ಸಭೆಯನ್ನು ನಡೆಸಲಾಯಿತು, ಈ ಸಂದರ್ಭದಲ್ಲಿ ಅಧ್ಯಕ್ಷ ಜೋ ಬಿಡೆನ್ ಅಫ್ಘಾನ್ ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ‘ನಿಖರವಾದ ಏರ್ ಸ್ಟ್ರೈಕ್’ ಮಾಡಲು ಆದೇಶ ಮಾಡಿದರು.
ಸ್ಟ್ರೈಕ್:
ಭಾರತೀಯ ಕಾಲಮಾನ ಜುಲೈ 31 ರಂದು ಬೆಳಿಗ್ಗೆ 7:18ಕ್ಕೆ ಕಾರ್ಯಾಚರಣೆಯನ್ನು ನಡೆಸಲಾಯಿತು. ಅಲ್-ಜವಾಹಿರಿಯನ್ನು ಮನೆಯ ಬಾಲ್ಕನಿಯಲ್ಲಿ ಡ್ರೋನ್ ಮೂಲಕ ‘ಹೆಲ್ಫೈರ್’ ಕ್ಷಿಪಣಿಗಳನ್ನು ಉಡಾಯಿಸಿ ಕೊಂದು ಹಾಕಿತು. ಆಕಾಶದಲ್ಲಿ ಗುರಿ ಇತ್ತು ಹೊಡೆದ ಧಾಳಿ ಎಷ್ಟು ನಿಖರವಾಗಿತ್ತು ಎಂದರೆ ಜವಾಹಿರಿ ನಿಂತಿದ್ದ ಕಿಟಕಿ ಮಾತ್ರ ನಾಶವಾಗಿದ್ದು ಉಳಿದಂತೆ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ.