National

ಎಲ್ಎಸಿಯಲ್ಲಿ ಮತ್ತೆ ಕೈ ಕೈ ಮಿಲಾಯಿಸಿದ ಭಾರತ-ಚೀನಾ ಸೈನಿಕರು: ಹಲವು ಯೋಧರಿಗೆ ಗಾಯ

ನವದೆಹಲಿ: ಭಾರತ ಚೀನಾ ಗಡಿಯಲ್ಲಿ ಮತ್ತೆ ಸಂಘರ್ಷ ಉಂಟಾಗಿದ್ದು ಉಭಯ ದೇಶಗಳ ನಡುವಿನ ಸೈನಿಕರು ಮತ್ತೆ ಕೈ ಕೈ ಮಿಲಾಯಿಸಿ ಸಂಘರ್ಷಕ್ಕಿಳಿದ ಪರಿಣಾಮ ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಡಿಸೆಂಬರ್ 9ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನ ವಾಸ್ತವ ಗಡಿ ರೇಖೆ (LAC) ಬಳಿ ಬಂದಿದ್ದ ಚೀನಾದ ಸೈನಿಕರಿಗೆ ಭಾರತೀಯ ಯೋಧರು ಪ್ರತಿರೋಧ ತೋರಿದ್ದಾರೆ. ಪರಿಣಾಮ ಸಂಘರ್ಷ ಉಂಟಾಗಿ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಘರ್ಷಣೆಯಲ್ಲಿ ಉಭಯ ದೇಶಗಳ ಹಲವು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘರ್ಷಣೆಯ ನಂತರ ಭಾರತ ಮತ್ತು ಚೀನಾದ ಪೀಪಲ್‌ ಲಿಬರೇಷನ್‌ ಆರ್ಮಿಯ ಸೈನಿಕರು ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ.

ಸಂಘರ್ಷದ ಬಳಿಕ ತವಾಂಗ್‌ನ ಭಾರತದ ಸೇನಾ ಕಮಾಂಡರ್ ಚೀನಾದ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಂಘರ್ಷ ನಡೆದ ಪ್ರದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಚನಾತ್ಮಕ ಕಾರ್ಯವಿಧಾನಗಳನ್ನು ಅನುಸರಿಸಿದ್ದಾರೆ ಎಂದು ವರದಿ ತಿಳಿಸಿದೆ.

Exit mobile version