
ನವದೆಹಲಿ: ಆಗಸ್ಟ್ ತಿಂಗಳಲ್ಲಿ ಸರಕು ಸೇವಾ ತೆರಿಗೆ ಸಂಗ್ರಹ(GST) 1.12 ಲಕ್ಷ ಕೋಟಿ ಆಗಿದೆ. ಇದನ್ನು ಭಾರತದ ಆರ್ಥಿಕತೆ ಚೇತರಿಕೆಯ ಹಾದಿ ಹಿಡಿದಿರುವ ಸೂಚನೆ ಎನ್ನಬಹುದು.
2020ರ ಆಗಸ್ಟ್ ನಲ್ಲಿ ಸುಮಾರು 86,000 ಕೋಟಿ ಜಿ.ಎಸ್.ಟಿ ಸಂಗ್ರಹವಾಗಿತ್ತು. 2020ರ ಆಗಸ್ಟ್ ಗೆ ಹೋಲಿಸಿದರೆ ಸುಮಾರು 30 ಶೇಕಡಾ ಹೆಚ್ಚು ಜಿಎಸ್ಟಿ ಸಂಗ್ರಹವಾಗಿದೆ ಎನ್ನಬಹುದು. ಸಂಗ್ರಹವಾದ 1.12 ಲಕ್ಷ ಕೋಟಿ ಜಿ.ಎಸ್.ಟಿ ಯಲ್ಲಿ, ಕೇಂದ್ರ ಜಿ.ಎಸ್.ಟಿ 20,522 ಕೋಟಿ , ರಾಜ್ಯ ಜಿ.ಎಸ್.ಟಿ 26605 ಕೋಟಿ , ಸಮಗ್ರ ಜಿ.ಎಸ್.ಟಿ 56,247 ಕೋಟಿ ಹಾಗೂ ಸೆಸ್ 8,646 ಕೋಟಿ ಸಂಗ್ರಹವಾಗಿದೆ.
ಕಳೆದ ಜುಲೈ ತಿಂಗಳಲ್ಲಿ 1.16 ಲಕ್ಷ ಕೋಟಿ ಜಿ.ಎಸ್.ಟಿ ಸಂಗ್ರಹವಾಗಿತ್ತು , ಅದಕ್ಕೆ ಹೋಲಿಸಿದರೆ ಆಗಸ್ಟ್ ತಿಂಗಳ ಜಿ.ಎಸ್.ಟಿ ಸಂಗ್ರಹದಲ್ಲಿ ಸ್ವಲ್ಪ ಇಳಿಕೆಯಾಗಿದೆ ಎನ್ನಬಹುದು. ಕೊರೋನಾದ ಎರಡನೆಯ ಅಲೆಯ ಕಾರಣಕ್ಕಾಗಿ ಇದೇ ವರ್ಷದ ಜೂನ್ ತಿಂಗಳಲ್ಲಿ ಜಿ.ಎಸ್.ಟಿ ಸಂಗ್ರಹ ಒಂದು ಲಕ್ಷ ಕೋಟಿಗಿಂತ ಕಡಿಮೆಯಾಗಿತ್ತು . ಅದಕ್ಕೂ ಮೊದಲು ಸತತ 9 ತಿಂಗಳುಗಳ ಕಾಲ ದೇಶದ ಜಿ.ಎಸ್.ಟಿ ಸಂಗ್ರಹ 1 ಲಕ್ಷ ಕೋಟಿಯನ್ನು ದಾಟಿತ್ತು. ಈಗ ಮತ್ತೆ ಜಿ.ಎಸ್.ಟಿ ಸಂಗ್ರಹ ಹಳಿಗೆ ಬರುವ ಲಕ್ಷಣ ಕಾಣಿಸಿದೆ.